Wednesday, April 30, 2025
32 C
Bengaluru
LIVE
ಮನೆ#Exclusive NewsTop Newsಮಾನವನ ದುರಾಸೆಗೆ ಅರಣ್ಯ ನಾಶ: ಇಚ್ಛಾಶಕ್ತಿ ಪ್ರದರ್ಶಿಸಿದರೆ ಅರಣ್ಯ ವ್ಯಾಪ್ತಿ ಶೇ.33ಕ್ಕೆ ಹೆಚ್ಚಳ.. ಸಚಿವ ಈಶ್ವರ...

ಮಾನವನ ದುರಾಸೆಗೆ ಅರಣ್ಯ ನಾಶ: ಇಚ್ಛಾಶಕ್ತಿ ಪ್ರದರ್ಶಿಸಿದರೆ ಅರಣ್ಯ ವ್ಯಾಪ್ತಿ ಶೇ.33ಕ್ಕೆ ಹೆಚ್ಚಳ.. ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಅರಣ್ಯ ಅಧಿಕಾರಿಗಳು ಜನರಿಗೆ ಕಾಡಿನ ಮಹತ್ವ ತಿಳಿಸಿ ಮತ್ತು ಹಸಿರು ಹೊದಿಕೆ ಹೆಚ್ಚಳ ಏಕೆ ಎಂಬ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಮಾಣಿಕವಾಗಿ ಸಸಿನೆಟ್ಟು ಬೆಳೆಸುವ ಇಚ್ಛಾಶಕ್ತಿ ಪ್ರದರ್ಶಿಸಿದರೆ ರಾಜ್ಯದ ಅರಣ್ಯ ವ್ಯಾಪ್ತಿ ಕೆಲವೇ ವರ್ಷಗಳಲ್ಲಿ ಶೇ.33ಕ್ಕೆ ತಲುಪುವುದರಲ್ಲಿ ಸಂದೇಹವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅರಣ್ಯ ಭವನದಲ್ಲಿ ನಡೆದ ಮೈಫಾರೆಸ್ಟ್ ವೈಜ್ಞಾನಿಕ ನಿಯತಕಾಲಿಕದ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಧನೆಗೆ ಅಸಾಧ್ಯವಾದ್ದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ, ಇಚ್ಛಾಶಕ್ತಿ ಇರಬೇಕು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕಾಡನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಿ, ಹೊಸ ಒತ್ತುವರಿಗೆ ಅವಕಾಶ ನೀಡದೆ, ಮಾನವೀಯ ನೆಲೆಗಟ್ಟಿನಲ್ಲಿ ಈಗಾಗಲೇ ಆಗಿರುವ ಒತ್ತುವರಿ ತೆರವು ಮಾಡಿಸಬೇಕು ಎಂದು ಸೂಚಿಸಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಪ್ರಕೃತಿ, ಪರಿಸರದ ಮೇಲಾಗುತ್ತಿದೆ. ಮಾಲಿನ್ಯ ಹೆಚ್ಚಳದಿಂದ ಕಡಿಯುವ ನೀರೂ ವಿಷವಾಗಿ ಜನರು ಅಸ್ವಸ್ಥರಾಗುತ್ತಿರುವುದನ್ನು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.

1864ರ ಜನವರಿ 11ರಂದು ಅರಣ್ಯ ಸಂರಕ್ಷಣೆಗಾಗಿ ಮೈಸೂರು ಅರಣ್ಯ ಇಲಾಖೆ ಸ್ಥಾಪಿಸಲಾಯಿತು. 1700ರ ದಶಕದಲ್ಲಿ ಸೇನೆಯ ಬಳಕೆಗಾಗಿ ಇದ್ದ ಮದ್ರಾಸು-ಕಣ್ಣೂರು ರಸ್ತೆಯ ನಿರ್ವಹಣೆಗಾಗಿ ಅತ್ಯುತ್ತಮ ತೇಗದ ಮರಗಳು ಸೇರಿದಂತೆ ಅರಣ್ಯ ನಾಶವಾಯಿತು. ನಂತರ 1799ರ ಮೈಸೂರು ಯುದ್ಧದ ಬಳಿಕ ಶ್ರೀರಂಗಪಟ್ಟಣದ ಪತನವಾದ ಮೇಲೆ ಮೈಸೂರಿನ ಸ್ಥಳೀಯ ವೃಕ್ಷ ಸಂಪತ್ತಿನ ಮೇಲೆ ಪ್ರಭಾವ ಬೀರಿತು ಎಂದ ಇತಿಹಾಸದ ಘಟನೆಗಳನ್ನು ಸಚಿವರು ಸ್ಮರಿಸಿದರು.

ಅದೇ ವೇಳೆ ಮೈಸೂರು ರಾಜ್ಯದ ಮೊದಲ ರೈಲು ಮಾರ್ಗವೂ ಸ್ಥಾಪನೆಯಾಯಿತು, ರೈಲು ಮಾರ್ಗಕ್ಕಾಗಿ ಅರಣ್ಯ ನಾಶ ಅವ್ಯಾಹತವಾಗಿ ನಡೆಯಿತು. ಆಗ ಮೈಸೂರು ಅರಣ್ಯ ಇಲಾಖೆ ಸ್ಥಾಪಿಸಿ ಮೇಜರ್ ಹಂಟರ್ ಅವರನ್ನು ಸಂರಕ್ಷಣಾಧಿಕಾರಿಯಾಗಿ ನೇಮಿಸಲಾಯಿತು. ಅವರು 5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಅರಣ್ಯ ಸಂರಕ್ಷಣೆಗೆ ಒತ್ತು ನೀಡಿದರು. ಮೀಸಲು ಅರಣ್ಯ ಘೋಷಣೆ ಮಾಡಿದರು, ಅರಣ್ಯ ಪ್ರದೇಶದ ಲೆಕ್ಕ ಇಡುವ ರಿಜಿಸ್ಟರ್ ನಿರ್ವಹಿಸಿದರು. ಇದರಿಂದಾಗಿ ಇಂದಿಗೂ ಅರಣ್ಯ ಉಳಿದಿದೆ ಎಂಬುದನ್ನು ಇತಿಹಾಸ ಸಾರುತ್ತದೆ. ನಾವು 100 ವರ್ಷ ಕಳೆದರೂ ಹಂಟರ್ ಅವರನ್ನು ಸ್ಮರಿಸುತ್ತೇವೆ. ಮೊದಲ ಭಾರತೀಯ ಅರಣ್ಯಧಾಧಿಕಾರಿ ಮುತ್ತಣ್ಣ ಅವರನ್ನು ಸ್ಮರಿಸುತ್ತೇವೆ. ಅದೇ ರೀತಿ ನಿಮ್ಮನ್ನು ಕೂಡ ಮುಂದಿನ ಪೀಳಿಗೆ ಸ್ಮರಿಸುವಂತಹ ಕಾರ್ಯ ಮಾಡಿ. ರಾಜ್ಯದ ಅರಣ್ಯ ಉಳಿಸಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಹಿರಿಯ ಅರಣ್ಯಾಧಿಕಾರಿಗಳಾದ ಎಂ.ಕೆ. ಅಪ್ಪಯ್ಯ, ಜಿ.ವಿ. ಸುಗುರ್, ಎಸ್. ಪಾಲಣ್ಣ, ಪರಮೇಶ್ವರಪ್ಪ, ಯಲ್ಲಪ್ಪರೆಡ್ಡಿ, ಬಿ.ಕೆ. ಸಿಂಗ್, ಎ.ಕೆ ವರ್ಮ, ಡಾ. ಎಂ.ಎಚ್. ಸ್ವಾಮಿನಾಥನ್, ದೀಪಕ್ ಶರ್ಮ, ಎ.ಸಿ. ಲಕ್ಷ್ಮಣ್, ರವಿ ರಾಲ್ಫ್, ಅಜಯ್ ಮಿಶ್ರಾ, ಸಂಜಯ್ ಮೋಹನ್, ಡಾ. ಯು.ವಿ. ಸಿಂಗ್ ಮತ್ತು ಬಿ.ಎಂ.ಟಿ ರಾಜೀವ್ ಅವರನ್ನು ಈಶ್ವರ ಖಂಡ್ರೆ ಸನ್ಮಾಸಿದರು. ಈ ಸಮಾರಂಭದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಕೆ. ದೀಕ್ಷಿತ್, ಸುಭಾಷ್ ಮಾಲ್ಕಡೆ, ಬಿ.ಪಿ. ರವಿ ಮತ್ತಿತರರು ಉಪಸ್ಥಿತರಿದ್ದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments