ನವದೆಹಲಿ: ಉತ್ತರ ಪ್ರದೇಶದ ದೆಹಲಿ- ಆಗ್ರಾ ಎಕ್ಸ್ಪ್ರೆಸ್ವೇನಲ್ಲಿ ದಟ್ಟವಾದ ಮಂಜಿನಿಂದ ಭೀಕರ ಅಪಘಾತ ಸಂಭವಿಸಿ ನಾಲ್ವರು ಮಂದಿ ಸಜೀವ ದಹನವಾಗಿದ್ದಾರೆ. 25 ಜನ ಗಾಯಗೊಂಡಿದ್ದು, ಅಪಘಾತದಲ್ಲಿ 3 ಕಾರುಗಳು, 7 ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.. ಬೆಳಗ್ಗಿನ ಜಾವ ದಟ್ಟವಾದ ಮಂಜು ಆವರಿಸಿದ ಹಿನ್ನೆಲೆ ಏಳು ಬಸ್‌ಗಳು ಮತ್ತು ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದೆ..
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಆಗ್ರಾ–ನೋಯ್ಡಾ ಲೇನ್‌ನ ಮೈಲ್‌ಸ್ಟೋನ್ ಬಳಿ ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ದಟ್ಟ ಮಂಜಿನಿಂದಾಗಿ ಮೊದಲು ಮೂರು ಕಾರುಗಳು ಡಿಕ್ಕಿ ಹೊಡೆದಿವೆ. ಇದಾದ ಬಳಿಕ ಹಿಂದಿನಿಂದ ವೇಗವಾಗಿ ಬಂದ ಏಳು ಬಸ್‌ಗಳು ಈ ಕಾರುಗಳಿಗೆ ಡಿಕ್ಕಿ ಹೊಡೆದಿವೆ. ಈ ಬಸ್‌ಗಳಲ್ಲಿ ಒಂದು ರಸ್ತೆ ಮಾರ್ಗದ ಬಸ್ ಆಗಿದ್ದು, ಉಳಿದ ಆರು ಸ್ವೀಪರ್ ಬಸ್‌ಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಾರುಗಳಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ಹೊರಬರಲು ಆಗದೇ ನಾಲ್ವರು ಮಂದಿ ಸಜೀವ ದಹನವಾಗಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ 11 ಅಗ್ನಿಶಾಮಕ ದಳದ ವಾಹನಗಳು, ಪೊಲೀಸ್ ಪಡೆಗಳು ಮತ್ತು ಆಂಬ್ಯುಲೆನ್ಸುಗಳು ಧಾವಿಸಿ, ಒಂದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ.
ಸುಟ್ಟ ವಾಹನಗಳ ಅವಶೇಷಗಳಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿಗಳು, ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ಹರಡಿತ್ತು. ಎಲ್ಲೆಡೆ ಗೊಂದಲ, ಹೊಗೆ ಮತ್ತು ಕಿರುಚಾಟ ಕೇಳಿಬರುತ್ತಿದ್ದವು. ಕೆಲವರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು, ಆದರೆ ಮಂಜು ಹಾಗೂ ಬೆಂಕಿಯ ಕಾರಣದಿಂದ ಸಹಾಯಕ್ಕೆ ಯಾರಿಗೂ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.


