ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ನೋಡಲೇಬೇಕಾದ ಸುದ್ದಿ ಇದು. ಕಟ್ಟಿದ ಮನೆಗಳಿಗೆ ಪಾಲಿಕೆ ಅನುಮತಿ ಇದ್ಯಾ..? ಪಾಲಿಕೆ ಅನುಮತಿ ಇಲ್ಲ ಅಂದ್ರೆ ಜೆಸಿಬಿ ತಂದು ಡೆಮಾಲಿಷ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ.
ಮಹದೇವಪುರ ವಲಯದ ಎ.ಇ.ಸಿ.ಎಸ್ ಲೇಔಟ್ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಮಹದೇವಪುರ ವಲಯ ಆಯುಕ್ತರಾದ ರಮೇಶ್ ರವರು ತಿಳಿಸಿದ್ದಾರೆ.
ಮಹದೇವಪುರ ವಲಯ ಎ.ಇ.ಸಿ.ಎಸ್ ಲೇಔಟ್, ಸಿ-ಬ್ಲಾಕ್ 1ನೇ ಮುಖ್ಯ ರಸ್ತೆಯಲ್ಲಿ ಬರುವ ಸೈಟ್ ನಂ. 735 ರ ಸ್ವತ್ತಿನ ಮಾಲೀಕರಾದ ಭಾಸ್ಕರ್ ಎಂಬುವವರು 38 X 59 ಚ.ಅ ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಾಳಿಗೆ, ನೆಲ ಸೇರಿದಂತೆ 6 ಅಂತಸ್ತಿನಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಮುಂದುವರಿದು ಸ್ವತ್ತಿನ ಮಾಲೀಕರಿಗೆ, ಕಟ್ಟಡದ ಮಾಲೀಕರಿಗೆ ಈಗಾಗಲೇ ಬಿಬಿಎಂಪಿ 2020ರ ಕಾಯ್ದೆ ಅಡಿ ತಾತ್ಕಾಲಿಕ ಆದೇಶ ಹಾಗೂ ನೋಟಿಸ್ಗಳನ್ನು ಜಾರಿ ಮಾಡಿರುತ್ತದೆ. ಆದರು ಸಹ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸದ ಹಿನ್ನೆಲೆ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಅಷ್ಟೇ ಅಲ್ಲದೇ ಹೆಚ್ಚುವರಿಯಾಗಿ ನಿರ್ಮಿಸಿರುವ 2 ಮಹಡಿಗಳನ್ನು ಮೂರು ಕೊರೆಯುವ ಯಂತ್ರಗಳು ಹಾಗೂ 10 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರುಗೊಳಿಸಲು ತಗುಲಿದ್ದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗಿದೆ.
ಇನ್ನು ಕಾರ್ಯಾಚರಣೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ, ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.