ನವದೆಹಲಿ: ದೆಹಲಿಯನ್ನೇ ನಡುಗಿಸಿದ ಭಯಾನಕ ಕಾರು ಸ್ಪೋಟದ ಪ್ರಮುಖ ಶಂಕಿತ ಡಾ. ಮೊಹಮ್ಮದ್ ಉಮರ್ ಅವರ ಮೊದಲ ಫೋಟೋವನ್ನು ತನಿಖಾ ಸಂಸ್ಥೆಗಳು ಬಿಡುಗಡೆ ಮಾಡಿವೆ.
ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಸಂಜೆ ಕೆಂಪು ಕೋಟೆಯ ಬಳಿ ನಡೆದಿದ್ದು, ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಆತ್ಮಾಹುತಿ ದಾಳಿಯೆಂದು ಪೊಲೀಸರು ಶಂಕಿಸುತ್ತಿದ್ದು, ಡಾ. ಉಮರ್ ಅವರೇ ಕಾರನ್ನು ಚಾಲನೆ ಮಾಡುತ್ತಾ ಸ್ಫೋಟ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ತನಿಖಾಧಿಕಾರಿಗಳು ಈಗ ಕಾರಿನ ಚಾಲಕನದ್ದೆಂದು ಶಂಕಿಸಲಾಗಿರುವ ಕತ್ತರಿಸಿದ ಕೈಯನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದು ಕಾಶ್ಮೀರದಲ್ಲಿರುವ ನಬಿ ಕುಟುಂಬದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಡಾ. ಉಮರ್ ಎನ್‌ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮೂಲಭೂತವಾದಿಗಳಾಗಿದ್ದ ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದ. ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನ್ನ ತಂಡವನ್ನು ಬಂಧಿಸಿದ್ದಕ್ಕೆ ನಾಪತ್ತೆಯಾಗಿದ್ದ ಉಮರ್ ಸಿಟ್ಟಾಗಿ ತನ್ನ ಬಳಿಯಿದ್ದ ಸ್ಫೋಟಕಗಳನ್ನು ಬಳಸಲು ನಿರ್ಧರಿಸಿರಬಹುದು. ಮುಂದೆ ನಾನು ಬಂಧನವಾಗಬಹುದು ಎಂಬುದನ್ನು ಅರಿತು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


