ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಡಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಸುಧಾರಣೆ ತರಬೇಕಾಗಿದೆ. ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಔಷಧಿ ಮತ್ತು ಇತರ ಸಲಕರಣೆಗಳು ಅಕ್ರಮವಾಗಿ ಸರಬರಾಜಾಗದಂತೆ ಎಚ್ಚರಿಕೆ ವಹಿಸಬೇಕು.

ಬೆಂಗಳೂರು(ಡಿ.07): ಬಳ್ಳಾರಿ,ರಾಜ್ಯದ ವಿವಿಧ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಶಿಶು ಮರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಮಧ್ಯಪ್ರವೇಶಿಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ. ಶುಕ್ರವಾರ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿದೆ.
ಘಟನೆ ಸಂಬಂಧ ಮಧ್ಯಪ್ರವೇಶ ಮಾಡಬೇಕು. ಅಲ್ಲದೆ, ಘಟನೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಿಯೋಗವು ಮನವಿಯಲ್ಲಿ ತಿಳಿಸಿದೆ. ಸಾವಿನ ಹಿಂದಿರುವ ಕಾರಣ, ಕಳಪೆ ಔಷಧ ಖರೀದಿಯಲ್ಲಿರುವವರ ಕೈವಾಡದ ತನಿಖೆ ನಡೆಸಬೇಕಾಗಿದೆ. ಆಸ್ಪತ್ರೆಯ ಆಡಳಿತವರ್ಗ, ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈವಾಡದ ಶಂಕೆ ಇದೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಎಂದು ಆಗ್ರಹಿಸಿದರು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಡಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಸುಧಾರಣೆ ತರಬೇಕಾಗಿದೆ. ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಔಷಧಿ ಮತ್ತು ಇತರ ಸಲಕರಣೆಗಳು ಅಕ್ರಮವಾಗಿ ಸರಬರಾಜಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಶಾಸಕ ಸಿ.ಕೆ.ರಾಮಮೂರ್ತಿ, ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಂಚಾಲಕ ಡಾ.ನಾರಾಯಣ್, ಸಹ ಸಂಚಾಲಕ ಡಾ.ಎಂ.ಎಸ್.ಸದಾನಂದ ಇತರರು ಉಪಸ್ಥಿತರಿದ್ದರು.
ಶಾಪ ತಟ್ಟದ ಇರಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಮರಣ ಹೊಂದುತ್ತಿರುವ ವೇಳೆ ಕಾಂಗ್ರೆಸ್ ಸರ್ಕಾರ 20 ಕೋಟಿ ರು. ವೆಚ್ಚ ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆ ಆಗಲಿ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮತ್ತು ಶಿಶು ಮರಣ ಕುರಿತ ಘಟನೆ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕು. ರಾಜ್ಯ ಸರ್ಕಾರದ ಅಮಾನವೀಯ ನಡೆಯನ್ನು ಜನ ಪ್ರಶ್ನಿಸುವಂತಾಗಿದೆ. ಮೃತ ಗರ್ಭಿಣಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು. ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಐವಿ ಗ್ಲುಕೋಸ್ ಖರೀದಿಸಿದ್ದರು. ಹೀಗಾಗಿ, ರಾಜ್ಯ ಸರ್ಕಾರವೇ ಈ ದುರ್ಘಟನೆಗೆ ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಹೇಳಿದ್ದಾರೆ.


