ದರ್ಶನ್ ದಿಕ್ಕೆಟ್ಟು ಕುಂತಿದ್ದಾರೆ. ಒಂದೇ ಒಂದು ಫೋಟೊ ಎಲ್ಲವನ್ನೂ ಹಾಳು ಮಾಡಿದೆ. ಅದು ಅವರ ಪಾಲಿಗೆ ಮಾತ್ರ. ಅನ್ನ ಕೊಡ್ರಪ್ಪ ಎಂದು ಜಾಮೀನು ಹಾಕಿ ನಾಟಕವಾಡುತ್ತಿದ್ದ ದರ್ಶನ್‌ಗೆ ಈಗ ಹಿಂಡಲಗಾ ಜೈಲಿಗೆ ಕಳಿಸಲಿದ್ದಾರೆ. ಏನದು ಹಿಂಡಲಗಾ ಕತ್ತಲಕೋಣೆ ಕರಾಮತ್ತು ? ಏನಾಗಲಿದೆ ಜಾಮೀನು ವಿಚಾರಣೆ ? ಅದರ ವಿವರ ಇಲ್ಲಿದೆ…
ನೋಡೋ ನಮ್ ಬಾಸು…ಜೈಲಲ್ಲಿದ್ರೂ ಹುಲಿನೇ…ಹೆಂಗೆ ಸಿಗರೇಟು ಸೇದ್ತಾ ಇದಾನೆ…’ ಹೀಗಂತ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಬಡಿದುಕೊಳ್ಳುತ್ತಿದ್ದಾರೆ. ಆದರೆ ಇದೇ ಫೋಟೊ…ಇದೇ ಹತ್ತು ನಿಮಿಷ ಸೇದಿ ಎಸೆಯುವ ಸಿಗರೇಟು…ಪಾತಕಿ ಪಕ್ಕ ಕುಂತ ಅಹಂ…ಒAದೇ ಒಂದು ದಿನದಲ್ಲಿ ಇಳಿಯಲಿದೆ. ಇದು ಅಂಧಾಭಿಮಾನಿಗಳಿಗೆ ಗೊತ್ತಿಲ್ಲ. ಗೊತ್ತಿದ್ದರೆ ಅವರೆಲ್ಲ ದರ್ಶನ್ ಫ್ಯಾನ್ಸ್ ಹೇಗಾಗುತ್ತಿದ್ದರು ?
ಜೈಲಿನಲ್ಲಿ ಹೇಗಿರಬೇಕೊ…ಹಾಗಿದ್ದರೆ ಏನೋ ಒಂದು ದಾರಿ ಹುಟ್ಟುತ್ತಿತ್ತು. ಕೊಲೆ ಆರೋಪದಲ್ಲಿ ಕೆಲವು ತಿಂಗಳಿಗೋ ವರ್ಷಕ್ಕೋ…ಜಾಮೀನು ಸಿಗುತ್ತಿತ್ತು. ಆದರೆ ಈಗ ಮಾಡಿಕೊಂಡ ಎಡವಟ್ಟಿನಿಂದ ಇನ್ನು ಎರಡು ಕೇಸ್‌ನಲ್ಲಿ ದರ್ಶನ್ ಜಾಮೀನಿಗೆ ಒದ್ದಾಡಬೇಕಿದೆ. ಜೈಲು ನಿಯಮ ಉಲ್ಲಂಘನೆ ಮಾಡಿದ್ದು, ಜೊತೆಗೆ ಪಾತಕಿ ಜೊತೆ ಕುಳಿತಿದ್ದು…ಮೊಬೈಲ್‌ನಿಂದ ಹೊರಗಿದ್ದವರಿಗೆ ಫೋನ್ ಮಾಡಿದ್ದು…ಎಲ್ಲವೂ ತಗುಲಿಹಾಕಿಕೊಳ್ಳಲಿವೆ. ಶನಿದೇವ ಕುತ್ತಿಗೆ ಮೇಲೆ ಕುಂತಿದ್ದಾನೆ. ದಾರ ಎಳೀತಿದ್ದಾನೆ…
ಪರಪ್ಪನ ಅಗ್ರಹಾರದ ಅಸಲಿಯತ್ತು ಸರ್ಕಾರಕ್ಕೆ ಗೊತ್ತಿಲ್ಲವೆಂತಲ್ಲ. ಇದೆಲ್ಲ ನಡೆಯುತ್ತದೆ ಎಂದು ಗೊತ್ತಿದ್ದರೂ ಸುಮ್ನನಿದ್ದರು. ಆದರೆ ಯಾವಾಗ ಫೋಟೊ ಹೊರಬಿತ್ತೋ…ಗೃಹಸಚಿವ ಪರಮೇಶ್ವರ್‌ಗೆ ಡೆಂಗ್ಯೂ ಜ್ವರ ಅಮರಿಕೊಂಡಿದೆ. ಸೊಳ್ಳೆ ಕಚ್ಚದೇ ಹೀಗೊಂದು ಚಳಿಜ್ವರಕ್ಕೆ ದೇಹ ಕೊಟ್ಟ ಮೊದಲ ವ್ಯಕ್ತಿ ಎನ್ನುವ ಬಿರುದೂ ದಕ್ಕಿದೆ. `ದರ್ಶನ್‌ಗೆ ಯಾವುದೇ ರಾಜಾತಿಥ್ಯ ನೀಡುತ್ತಿಲ್ಲ…’ ಹೀಗೆಂದು ಹಿಂದೊಮ್ಮೆ ಹೇಳಿದ್ದರು. ಈಗ ಕಣ್ಣ ಮುಂದೆಯೇ ಬಂಡವಾಳ ಬಯಲಾಗಿದೆ. ಪರಮೇಶ್ವರ ಕಕ್ಕಾಬಿಕ್ಕಿ…
ಪರಿಣಾಮ…ತನಿಖಾ ತಂಡ ರಚಿಸಲಾಗಿದೆ. ಮೂರು ಮೂರು ತಂಡ ಅಕ್ರಮವನ್ನು ಬಯಲಿಗೆ ಎಳೆಯಲಿವೆ. ಒಂಬತ್ತು ಮಂದಿ ಅಮಾನತ್ತಾಗಿದ್ದಾರೆ. ಜೈಲಿಗೆ ಹೊಸ ಡಿಐಜಿ ಬಂದಿದ್ದಾರೆ. ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಎಲ್ಲ ಪಾತಕಿ ಲೋಕ ಕೆಲವು ದಿನ ಬಾಲ ಮುದುರಿಕೊಳ್ಳಲಿವೆ. ನೆಮ್ಮದಿಯಾಗಿ ಸಿಗರೇಟು…ಬಿರಿಯಾನಿ ಹೊಡೆಯುತ್ತಿದ್ದೆ…ಅದಕ್ಕೂ ಕಲ್ಲು ಹಾಕಿದೆಯಲ್ಲ ಶಿವನೇ ಎನ್ನುತ್ತಿದ್ದಾರೆ ದರ್ಶನ್. ಫೋಟೊ ತೆಗೆದ ಪಾತಕಿ ವೇಲು ಪಾಡಂತೂ ಪರಪೋಶಿಯಂತಾಗಿದೆ.
ಪರಪ್ಪನ ಅಗ್ರಹಾರ ಮಾತ್ರ ಅಲ್ಲ, ರಾಜ್ಯದ ಎಲ್ಲ ಬಂಧಿಖಾನೆಗಳ ತಪಾಸಣೆಗೆ ಇಳಿದಿದೆ ಸರ್ಕಾರ. ಸೇಮ್ ಟೈಮ್ ದರ್ಶನ್ ಗ್ಯಾಂಗ್‌ಗೆ ಆದಷ್ಟು ಬೇಗ ಬೇರೆ ಜೈಲಿಗೆ ವರ್ಗಾಯಿಸಲು ಒದ್ದಾಡುತ್ತಿದ್ದಾದೆ. ಒಂದರ ಮೇಲೊಂದು ಗೃಹ ಇಲಾಖೆಯ ಸೋಲು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತಂದಿರೋದು ನಿಜ. `ಆಗಿದ್ದು ಆಗಿ ಹೋಗಿದೆ…ಅದಕ್ಕೆ ಸಸ್ಪೆಂಡ್ ಮಾಡಿದ್ದೆವಲ್ಲ…’ ಇದು ಪರಮೇಶ್ವರ ಘೋಷವಾಕ್ಯ. ಹಾಗಿದ್ದ ಮೇಲೆ ನೀವ್ಯಾಕೆ ಇರಬೇಕು…ಸೀಟು ಖಾಲಿ ಮಾಡಿ ಎನ್ನುತ್ತಿದೆ ಕರುನಾಡಿನ ಜನತೆ. ನಿಜ ಅಲ್ಲವೆ ?
`ಮುಖ್ಯಮಂತ್ರಿ ಆಗಬೇಕು…’ ಇದು ಪರಮೇಶ್ವರ್ ಕೋಟಿ ವರ್ಷದ ಕನಸು. ಅಲ್ರಿ…ನೆಟ್ಟಗೆ ಒಂದೇ ಒಂದು ಗೃಹ ಇಲಾಖೆಯನ್ನು ನಿಭಾಯಿಸಲು ಆಗದವರು…ರಾಜ್ಯವನ್ನು ಹೇಗೆ ಆಳುತ್ತಾರೆ ? ಈಗಿರುವ ಕುರ್ಚಿಗೆ ಬಣ್ಣ ಹೊಡೆದುಕೊಂಡು ಕುಂತುಕೊಳ್ಳಿ ಎನ್ನುತ್ತಿದ್ದಾರೆ ಅವರೇ ಪಾರ್ಟಿ ಜನರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಯಾವತ್ತೂ ನಿಲ್ಲಲ್ಲ. ಕೋಟಿ ಕೋಟಿ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳುವ ಅಧಿಕಾರಿ ವರ್ಗಕ್ಕೆ ಅಕ್ರಮ ಬೇಕೇಬೇಕು. ಇನ್ನೆಲ್ಲಿ ಸುಧಾರಣೆ ಬದಲಾವಣೆ ? ಕ್ಯಾಕರಿಸುತ್ತಿದೆ ಕನ್ನಡ ನಾಡು…
ಸಿಗರೇಟು…ಬಿರಿಯಾನಿ ಆಸೆಗೆ ದರ್ಶನ್ ಬಲಿಯಾಗಿದ್ದಾರೆ. ಅದರ ಪರಿಣಾಮ ಇನ್ನು ಮುಂದೆ ಉಣ್ಣಲಿದ್ದಾರೆ. ಯಾರೂ ಅವರ ಹತ್ತಿರ ಸುಳಿಯಲ್ಲ…ಮಾತಾಡಿಸಲ್ಲ…ಜೈಲೂಟ ತಪ್ಪಲ್ಲ…ಸಿಗರೇಟು ಇಲ್ಲ…ಬಿರಿಯಾನಿ ಬರೋದಿಲ್ಲ…ನಾಗ ಸೈಡ್‌ವಿಂಗ್‌ನಲ್ಲಿ ಸನ್ನೆ ಮಾಡಿ ಕರೆಯೋಲ್ಲ…ರಚಿತಾ ರಾಮ್ ಮತ್ತೆ ಬಂದು ಕಣ್ಣೀರಿಟ್ಟು ಮೂಗು ಒರೆಸಿಕೊಳ್ಳಲ್ಲ. `ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ…’ ಈ ಹಾಡಿಗೆ ದರ್ಶನ್ ಒಂಟಿಯಾಗಿ ಡ್ಯೂಯೆಟ್ ಹಾಡಬೇಕು. ಶೂಟಿಂಗ್ ಮಾಡಲು ಕ್ಯಾಮೆರಾ ಮಾತ್ರ ಇರಲ್ಲ…ಪಾಪ…
ದರ್ಶನ್ ಯಾವ ಹೊಸ ಜೈಲಿನಲ್ಲಿ ಮಲಗಲಿದ್ದಾರೆ, ಮುದ್ದೆ ಮುರಿಯಲಿದ್ದಾರೆ…ಅದರ ಫಲಿತಾಂಶ ಇನ್ನೇನು ಬರಲಿದೆ. ಅಕಸ್ಮಾತ್ ಹಿಂಡಲಗಾ ಜೈಲಿಗೆ ಬಿಸಾಕಿದರೆ…ಅದರಲ್ಲೂ ಗಿನ್ನಿಸ್ ರೆಕಾರ್ಡ್ ಸ್ಥಾಪಿಸಲಿದ್ದಾರೆ ದಾಸ. ಇದುವರೆಗೆ ಅಲ್ಲಿ ಸ್ವತಂತ್ರ ಹೋರಾಟಗಾರರರು, ನಟೋರಿಯಸ್ ಕ್ರಿಮಿನಲ್‌ಗಳಿದ್ದು ಹೋಗಿದ್ದರು. ಆದರೆ ಯಾವುದೇ ನಟ ಹಿಂಡಲಗಾ ಬಾಗಿಲನ್ನು ಬಯಸಿ ಬಯಸಿ ಬಡಿದಿರಲಿಲ್ಲ. ಹಾಗೇನಾದರೂ ಆದರೆ ಐರಾವತ ನಂಬರ್ ವನ್ ಕೊಲೆ ಆರೋಪಿ ಇನ್ ಹಿಂಡಲಗಾ. ಪವಿತ್ರಾಗೌಡ ಕಿಲಕಿಲ..ರಚಿತಾರಾಮ್ ವಿಲವಿಲ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ