ದೇಶ/ವಿದೇಶರಾಜಕೀಯ

ಸಿಲಿಂಡರ್ ಬಿಸಿ; ಸಂಸತ್ ಆವರಣದಲ್ಲಿ ಇಟ್ಟಿಗೆ ಒಲೆ ಹಚ್ಚಿ ವಿಪಕ್ಷಗಳ ಆಕ್ರೋಶ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಿಕ್ಕಟ್ಟಿನ ಕುರಿತು ಸರ್ಕಾರದಿಂದ ಉತ್ತರ ಪಡೆಯಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಪಕ್ಷಗಳ ಸಂಸದರು ‘ನಾಮ್ ನರೇಂದ್ರ, ಕಾಮ್ ಸರೆಂಡರ್’ ಮತ್ತು ‘ಮೋದಿ ಜಿ, ಎಲ್‌ಪಿಜಿ’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿಶೇಷವಾಗಿ ಮಹಿಳಾ ಸಂಸದರು ಸಾಂಕೇತಿಕವಾಗಿ ಇಟ್ಟಿಗೆಯ ಒಲೆಗಳನ್ನು ಹಚ್ಚಿ ಕುಳಿತುಕೊಳ್ಳುವ ಮೂಲಕ ಅಡುಗೆ ಅನಿಲದ ಕೊರತೆಯನ್ನು ಎತ್ತಿ ತೋರಿಸಿದರು. ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಜನರಿಗೆ ಗಾಬರಿಯಾಗಬೇಡಿ ಎಂದು ಹೇಳುತ್ತಿದ್ದಾರೆ, ಆದರೆ ಅವರು ಅಡಾನಿ ಪ್ರಕರಣ ಮತ್ತು ಎಪ್ಸ್ಟೀನ್ ವಿಷಯಗಳಿಂದ ತಾವೇ ಆತಂಕಕ್ಕೊಳಗಾಗಿದ್ದಾರೆ ಎಂದು ಟೀಕಿಸಿದರು. ಪ್ರಧಾನಿಯವರು ಸದನದ ಒಳಗೆ ಬರಲು ಸಾಧ್ಯವಾಗುತ್ತಿಲ್ಲ, ಅವರ ಕುರ್ಚಿ ನಿನ್ನೆ ಖಾಲಿ ಇತ್ತು ಎಂದು ಲೇವಡಿ ಮಾಡಿದರು.

ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ದೇಶದ ಹೋಟೆಲ್ ಉದ್ಯಮ ಮತ್ತು ಬೀದಿ ಬದಿ ವ್ಯಾಪಾರಿಗಳು ತತ್ತರಿಸುತ್ತಿದ್ದಾರೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ರೆಸ್ಟೋರೆಂಟ್‌ಗಳು ಕೇವಲ ಒಂದೆರಡು ದಿನಗಳ ಸ್ಟಾಕ್ ಹೊಂದಿದ್ದು, ಅಡುಗೆಗೆ ಪರ್ಯಾಯವಾಗಿ ಇಂಡಕ್ಷನ್ ಕುಕ್‌ಟಾಪ್‌ಗಳು, ಮೈಕ್ರೋವೇವ್‌ಗಳು ಮತ್ತು ಸೌದೆ ಒಲೆಗಳನ್ನು ಅವಲಂಬಿಸುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರವು ಸದ್ಯಕ್ಕೆ ಮನೆಬಳಕೆಯ ಗ್ಯಾಸ್‌ಗೆ ಆದ್ಯತೆ ನೀಡುತ್ತಿರುವುದರಿಂದ, ವಾಣಿಜ್ಯ ಬಳಕೆಯ ಮೇಲೆ ಅವಲಂಬಿತವಾಗಿರುವ ಸಣ್ಣ ಮತ್ತು ದೊಡ್ಡ ಉದ್ಯಮಗಳು ಮುಚ್ಚುವ ಭೀತಿಯಲ್ಲಿವೆ.ಈ ನಡುವೆ ಪ್ರಧಾನಿ ಮೋದಿ ಅವರು ಬುಧವಾರವಷ್ಟೇ ಜನರಿಗೆ ಧೈರ್ಯ ತುಂಬಿದ್ದು ಮತ್ತೆ ಕಾಣೆಯಾಗಿದ್ದರಷ್ಟೇ ಎಂದು ಕುಟುಕಿದರು.

Comments (0)

Your email address will not be published. Required fields are marked *

Back to top button