#Exclusive NewsTop Newsರಾಜಕೀಯರಾಜ್ಯಸುದ್ದಿ

ಕೋವಿಡ್ ಅಕ್ರಮ: ಹಣ ತಿಂದವರನ್ನು ಬಿಡೋದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್

ಬೆಂಗಳೂರು: ಕೋವಿಡ್ ಹಗರಣದಲ್ಲಿ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಸಮಿತಿಯ ಶಿಫಾರಸ್ಸಿನಂತೆಯೇ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೋವಿಡ್  ಹಣ ತಿಂದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಚಾರಣೆ ಆಯೋಗದ ಶಿಫಾರಸ್ಸಿನ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಉಸ್ತುವಾರಿ ಹಾಗೂ ಅಧಿಕಾರಿಗಳ ಸಮಿತಿ ವರದಿ ಪರಾಮರ್ಶೆ ಹಾಗೂ ಶಿಫಾರಸ್ಸು ಕುರಿತು ವಿಧಾನಸೌಧದಲ್ಲಿ ಉಪಸಮಿತಿಯು ಶನಿವಾರ ಸಭೆ ನಡೆಸಿತು. ನಂತರ ಸಮಿತಿಯ ಮುಖ್ಯಸ್ಥರಾದ ಡಿ.ಕೆ.ಶಿವಕುಮಾರ್ ಅವರು ಮಾಹಿತಿ ನೀಡಿದರು.

ನಮ್ಮ ಸರ್ಕಾರ ಕೋವಿಡ್ ಅವಧಿಯಲ್ಲಿನ ಅಕ್ರಮದ ಕುರಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರ ವರದಿಯನ್ನು ಸ್ವೀಕರಿಸಿದ್ದೇವೆ. ಈ ವರದಿಯ ಪರಿಶೀಲನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ. ಉಳಿದಂತೆ ಸಮಿತಿ ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮಾತ್ರವಲ್ಲದೆ ಇಲಾಖೆಯ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ. ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಎಷ್ಟು ಪ್ರಕರಣ ದಾಖಲಾಗುತ್ತವೋ ಗೊತ್ತಿಲ್ಲ ಎಂದು ತಿಳಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ RTPCR ಪರೀಕ್ಷೆ ಮಾಡಲಾಗಿದ್ದು, 84 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ಬಿಲ್ ಮಾಡಿದ್ದಾರೆ. ಇದಕ್ಕಾಗಿ 400 ಕೋಟಿ ಪಾವತಿ ಮಾಡಲಾಗಿದೆ. 84 ಲಕ್ಷ ಎಂದರೆ ಬೆಂಗಳೂರಿನಲ್ಲಿರುವ ಪ್ರತಿ ಮನೆಗೆ ಇಬ್ಬರಿಗೆ ಪರೀಕ್ಷೆ ಮಾಡಿರಬೇಕು. ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಂತ್ರಿಕವಾಗಿ ಸಮರ್ಥವಿಲ್ಲದೆ, ICMR ಅನುಮತಿ ಇಲ್ಲದೆ ಪರೀಕ್ಷೆಯನ್ನು ನಡೆಸಲಾಗಿದೆ. 146 ಕೋಟಿ ಬಿಲ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ಎಂದರೆ ಅಲ್ಲಿ ಎಷ್ಟು ಜನದಟ್ಟಣೆ ಸರದಿ ಸಾಲು ಇರಬೇಕು. ಹೀಗಾಗಿ ಈ ವಿಚಾರದಲ್ಲಿ ವಿಧಾನಸೌಧದಿಂದ ಕೆಳ ಹಂತದವರೆಗೂ ಯಾವ ರೀತಿ ಪ್ರಕ್ರಿಯೆ ಮಾಡಿದ್ದಾರೆ. ಕಾನೂನು ಚೌಕಟ್ಟು ಮೀರಿ ಏನೆಲ್ಲಾ ತೀರ್ಮಾನ ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿಯನ್ನು ನಾವು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ನಿವೃತ್ತ ಅಧಿಕಾರಿಗಳ ಸಮಿತಿಯಿಂದ ಮಾರ್ಗದರ್ಶನ:

ಈ ವರದಿಗಳನ್ನು ಪರಿಶೀಲಿಸಿ ನಮಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಈ ಪ್ರಕರಣದಲ್ಲಿ ನಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡಬಾರದು ಎಂದು ಈ ನಿರ್ಧಾರ ಮಾಡಿದ್ದೇವೆ. ಮತ್ತು ಈ ಸಮಿತಿಯನ್ನು ರಚಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ?

ಇದು ರಾಜಕೀಯ ಪಿತೂರಿ ಎಂದು ಮಾಜಿ ಆರೋಗ್ಯ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ,  ನಮ್ಮ ಕಡೆ ಒಂದು ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ. ನಾನು ಅವರ ಸುದ್ದಿಯನ್ನೇ ಮಾತನಾಡಿಲ್ಲ. ಅವರೇಕೆ ಮಾತನಾಡುತ್ತಿದ್ದಾರೆ. ವರದಿಯ ಪ್ರಮುಖ ಅಂಶಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದೇನೆ ಅಷ್ಟೇ. ಈ ವರದಿಯಲ್ಲಿ ಮೇಲಿಂದ ಕೆಳಗಿನವರೆಗೂ ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು, ಅಧಿಕಾರಿಗಳು, ರಾಜಕಾರಣಿಗಳು, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವಿರುದ್ಧ ಸೆಕ್ಷನ್ 71 ಹಾಗೂ ಸೆಕ್ಷನ್ 11ರ ಅಡಿಯಲ್ಲಿ ಸಾರ್ವಜನಿಕ ಸೇವೆ ಅವಧಿಯಲ್ಲಿ ಭ್ರಷ್ಟಾಚಾರ ತಡೆಯುವ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.

ಕುನ್ಹಾ ಅವರ ವರದಿ ಆಧಾರದ ಮೇಲೆ ಎಸ್ಐಟಿ ರಚನೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ಅಂತಿಮವಾದ ಬಳಿಕ ಮಾಹಿತಿ ನೀಡುತ್ತೇವೆ. ಈ ವಿಚಾರವಾಗಿ ನಾವು ಬಿಜೆಪಿಯವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಮಿತಿಯ ಶಿಫಾರಸ್ಸು ಪರಿಶೀಲಿಸುತ್ತಿದ್ದು, ಅಧಿಕಾರಿಗಳಿಗೆ ವಿಚಾರಣೆ ನಡೆಸುವ ಸಂಪೂರ್ಣ ಅಧಿಕಾರವನ್ನು ನೀಡಿದ್ದೇವೆ ಎಂದು ತಿಳಿಸಿದರು.

ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಯಾವಾಗ ಕೊಂಡೊಯ್ಯುತ್ತೀರಿ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಎಲ್ಲ ಪುಸ್ತಕವನ್ನು ಒಂದೇ ದಿನ ಓದಿ ಮುಗಿಸಲು ಆಗುವುದಿಲ್ಲ. ಹಂತ ಹಂತವಾಗಿ ಈ ಪ್ರಕರಣವನ್ನು ಪರಿಶೀಲಿಸುತ್ತೇವೆ. ಇದಕ್ಕೆ ಸಮಯಾವಕಾಶ ಬೇಕು. ಕಾನೂನು ತನ್ನ ಕಾರ್ಯ ನಿರ್ವಹಿಸಲಿದೆ  ಎಂದರು.

ಹೆಣದ ಮೇಲೆ ಬಿಜೆಪಿ ಹಣ ಮಾಡಿದೆ:

ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದೆ ಎಂದು ನಾವೇ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದೇವೆ. ಜನ ಇವುಗಳನ್ನು ನೋಡಿ ರೋಸಿ ಹೋಗಿದ್ದಾರೆ. ಈಗ ನಾನು ನಿಮಗೆ ಕೇವಲ ಎರಡು ಉದಾಹರಣೆಯನ್ನಷ್ಟೇ ಮಾತ್ರ ಹೇಳಿದ್ದೇನೆ. ಕೋವಿಡ್ ಹಣ ತಿಂದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Comments (0)

Your email address will not be published. Required fields are marked *

Back to top button