ಬೆಂಗಳೂರು: 2010ರಲ್ಲಿ ನಡೆದಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಸಿಬಿಐ ಬಂಧಿಸಿದೆ. ಬೇಲೇಕೇರಿ ಅದಿರು ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಕೈ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಿರುವ ಕೇಂದ್ರಿಯ ತನಿಖಾ ದಳದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಿದ್ದಾರೆ.
ಸತೀಶ್ ಸೈಲ್ ಅವರನ್ನು ಅಪರಾಧಿ ಎಂದು ಆದೇಶ ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಿಲಿದೆ. ಇನ್ನು, ಈಗಾಗಲೇ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಿರುವ ಸಿಬಿಐ ತಂಡ ನಾಳೆ ಮಧ್ಯಾಹ್ನ 12.30ಕ್ಕೆ ನ್ಯಾಯಾಲಯದ ಎದುರು ಹಾಜರುಪಡಿಸಲಿದೆ.
2010ರಲ್ಲಿ ಬೇಲೇಕೇರಿಯಲ್ಲಿ ಜಪ್ತಿ ಮಾಡಲಾಗಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅಪರಾಧಿಗಳಾದ ಮಹೇಶ್ ಬಿಳೆಯಿ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ಸೇರಿದಂತೆ ಮೂವರು ಅಪರಾಧಿಗಳಿಗೆ ಕೋರ್ಟ್ ನಾಳೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ.
ಬೇಲೇಕೆರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳಲ್ಲಿ ನ್ಯಾಯಾಲಯ ಇಂದು ಅಂತಿಮ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ ಸಿಬಿಐ ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು.
ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಇಂದು ಅಂತಿಮ ಆದೇಶವನ್ನು ಹೊರಡಿಸಿದ್ದಾರೆ. ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಶ್ ಬಿಳೆಯಿ ಸೇರಿದಂತೆ ಹಲವರ ವಿರುದ್ಧದ ಪ್ರಕರಣ ದಾಖಲಾಗಿತ್ತು. ಇದೀಗ ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್ ಬಿಳೆಯಿ, ಶಾಸಕ ಸತೀಶ್ ಸೇರಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.


