ಶಿವಮೊಗ್ಗ: ಹಸೆಮಣೆ ಏರಬೇಕಿದ್ದ ಜೋಡಿಯೊಂದು ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರೇಖಾ (20) ಬಸವನಗೌಡ ದ್ಯಾಮನಗೌಡ್ರ (25) ಮೃತ ದುರ್ದೈವಿಗಳು. ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾಗ, ಶಿವಮೊಗ್ಗದ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ದುರ್ಘಟನೆ ನಡೆದಿದೆ.
ಮೃತ ಯುವತಿ ರೇಖಾ ಹಾಗೂ ಬಸವನಗೌಡ ಮದುವೆ ಫಿಕ್ಸ್ ಆಗಿತ್ತು. ಆಗಸ್ಟ್ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥವಾಗಿತ್ತು. ಮಳೆಯ ಕಾರಣಕ್ಕೆ ಮದುವೆಯನ್ನು ಮುಂದೂಡಿದ್ದ 2 ಕುಟುಂಬಸ್ಥರು, ಡಿಸೆಂಬರ್ನಲ್ಲಿ ಇಬ್ಬರ ಮದುವೆಗೆ ದಿನಾಂಕ ನಿಗದಿ ಮಾಡಿದ್ದರು. ನಿನ್ನೆ ಸಂಜೆ ಈ ಜೋಡಿ ಮತ್ತಿಕೋಟೆಯಿಂದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಹೊರಟ್ಟಿದ್ದರು. ಆದ್ರೆ ದುರಾದೃಷ್ಟವಶಾತ್ ಅಂಬಾರಕೊಪ್ಪ ಕ್ರಾಸ್ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಬೈಕ್ಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.