ಕೊಪ್ಪಳ: ಬೀದಿ ದೀಪದ ಕಂಬಗಳಲ್ಲಿ ಬಿಲ್ಲು ಬಾಣ, ಗದೆ ಮತ್ತು ತಿರುಪತಿ ತಿಮ್ಮಪ್ಪನ ಸಂಕೇತ ವಿವಾದದ ಸ್ವರೂಪ ಪಡೆದುಕೊಂಡಿದ್ದ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಫ್ರೀಡಂಯ ವರದಿ ಬೆನ್ನಲ್ಲೆ ಸಂಕೇತಗಳ ತೆರವುಗೊಳಿಸಲು ತಹಶೀಲ್ದಾರ್ ತಾವೇ ಪೊಲೀಸರಿಗೆ ಬರೆದಿದ್ದ ಪತ್ರವನ್ನು ಹಿಂಪಡೆದಿದ್ದಾರೆ.
ಒಂದಡೆ ಎಸ್ಡಿಪಿಐ, ಇನ್ನೊಂದೆಡೆ ಶಾಸಕ ಜನಾರ್ಧನ ರೆಡ್ಡಿ ಯಾವುದೇ ಕಾರಣಕ್ಕೂ ಕೂಡ ಕಂಬಗಳನ್ನು ತೆರವು ಮಾಡಲು ಬಿಡಲ್ಲ ಎಂದು ಹೇಳಿದ್ದರು. ಆದ್ರೆ, ಇದೀಗ ತಹಶೀಲ್ದಾರ್ ಅವರು ವಿವಾದಿತ ಕಂಬಗಳ ತೆರವು ಮಾಡಬೇಕು, ಜೊತೆಗೆ ಕಂಬ ಅಳವಡಿಸಿರುವ ಸಂಸ್ಥೆ ವಿರುದ್ದ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಆದ್ರೆ, ಇದು ಮತ್ತೊಂದು ವಿವಾದ ಪಡೆಯುತ್ತಿದ್ದಂತೆ ತಹಶೀಲ್ದಾರ್ ತಾವೇ ಪೊಲೀಸರಿಗೆ ಬರೆದಿದ್ದ ಪತ್ರವನ್ನು ಹಿಂಪಡೆದಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ರಸ್ತೆ ಪಕ್ಕದಲ್ಲಿ, ರಸ್ತೆಯ ಮಧ್ಯಭಾಗದಲ್ಲಿ ಬೀದಿ ದೀಪ ಕಂಬಗಳನ್ನು ನಿಲ್ಲಿಸಲಾಗುತ್ತದೆ. ಅನೇಕ ಕಡೆ ಜನರು ನಮ್ಮ ಏರಿಯಾದಲ್ಲಿ ರಸ್ತೆಗಳಲ್ಲಿ ಸ್ಟ್ರೀಟ್ ಲೈಟ್ ಕಂಬಗಳನ್ನು ಹಾಕಿ ಎಂದು ಆಗ್ರಹಿಸುತ್ತಲೇ ಇರುತ್ತಾರೆ. ಆದ್ರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ವಿದ್ಯುತ್ ಕಂಬಗಳನ್ನು ಹಾಕುವುದರ ಜೊತೆಗೆ ಹಿಂದೂ ಧರ್ಮದ ಕೆಲ ದೇವರ ಸಂಕೇತಗಳನ್ನು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
ಹೌದು, ಗಂಗಾವತಿ ಪಟ್ಟಣದ ಜುಲೈ ನಗರ ಕ್ರಾಸ್ನಿಂದ ಸಿಬಿಎಸ್ ಸರ್ಕಲ್ವರೆಗೆ ಹದಿನೈದಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಕೆಲ ದಿನಗಳ ಹಿಂದಷ್ಟೇ ಅಳವಡಿಸಲಾಗಿತ್ತು. ಆದ್ರೆ, ವಿದ್ಯುತ್ ಕಂಬಗಳ ಮೇಲ್ಬಾಗದಲ್ಲಿ ಒಂದೆಡೆ ಗದೆಯ ಚಿತ್ರ, ಇನ್ನೊಂದೆಡೆ ಬಿಲ್ಲು ಬಾಣದ ಹಾಗೂ ಮಧ್ಯಬಾಗದಲ್ಲಿ ತಿರುಪತಿ ತಿಮ್ಮಪ್ಪನ ನಾಮದ ಚಿತ್ರವಿತ್ತು. ಕಬ್ಬಿಣದಿಂದ ಮಾಡಿರುವ ಈ ಚಿತ್ರಗಳೇ ಅನೇಕರ ಆಕ್ಷೇಪಕ್ಕೆ ಕಾರಣವಾಗಿದ್ದವು.