ಬೆಂಗಳೂರು: ಬಿಜೆಪಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆಸಿದೆ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿ ಆಗಸ್ಟ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ರಾಹುಲ್ ಗಾಂಧಿಯವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನೆ ಆಯೋಜಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯ ನಿರ್ಧಾರಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಚುನಾವಣೆಯಲ್ಲಿ ಸೋಲನ್ನು ಮರೆಮಾಚಲು ರಾಹುಲ್ ಗಾಂಧಿ ಇಂತಹ ಹತಾಶ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. ಕಳೆದ ಚುನಾವಣೆಯಲ್ಲಿ ವಂಶಪಾರಂಪರ್ಯಕ್ಕಿಂತ ದೇಶದ ಅಭಿವೃದ್ಧಿಗೆ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಅಕ್ರಮದ ಆರೋಪಗಳಿಗೆ 100% ಪುರಾವೆ ಇದ್ದರೆ, ಬೀದಿ ನಾಟಕದ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.


