ಬೆಳಗಾವಿ: 1924ರ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು(CWC) ದೇಶದ ರಾಜಕೀಯ ಹಾಗೂ ಕಾಂಗ್ರೆಸ್ ಪಕ್ಷದ ನಿರಂತರ ಹೋರಾಟಕ್ಕೆ ಪುಷ್ಟಿ ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇಣುಗೋಪಾಲ್, ಮಹಾತ್ಮ ಗಾಂಧಿಯವರು ಒಂದೇ ಒಂದು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.ಮಹಾತ್ಮಾ ಗಾಂಧಿಯವರು ಅಹಿಂಸಾ ತತ್ವವನ್ನು ಪ್ರಚಾರ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯವನ್ನು ತರಲು ಈ ತತ್ವದಿಂದ ಬ್ರಿಟಿಷರ ವಿರುದ್ಧ ಹೋರಾಡಿದರು, ಬಿಜೆಪಿ ಈಗ ಎಲ್ಲವನ್ನೂ ನಾಶಪಡಿಸಿದೆ ಎಂದರು.
ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿದ್ದಾರೆ, ಸಮಾನತೆ ದೇಶದಲ್ಲಿಲ್ಲ. ದೇಶದಲ್ಲಿ ಒಬ್ಬ ವ್ಯಕ್ತಿಯ ಹಿತಾಸಕ್ತಿ ಕಾಪಾಡಲು ಸರಕಾರ ಆದ್ಯತೆ ನೀಡುತ್ತಿದೆ. ಸಾರ್ವಜನಿಕ ಉದ್ದಿಮೆಗಳು ಮಾರಾಟವಾಗುತ್ತಿದ್ದು, ರಾಷ್ಟ್ರದ ಆಸ್ತಿಗಳು ಒಬ್ಬರ ಕೈ ಸೇರುತ್ತಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಎಸ್‌ಸಿ/ಎಸ್‌ಟಿಗಳು, ಹಿಂದುಳಿದ ವರ್ಗಗಳು ಮತ್ತು ಸಮಾಜದ ಬಡ ವರ್ಗಗಳಿಗೆ ಭದ್ರತೆಯನ್ನು ಒದಗಿಸಲು ಜಾತಿ ಗಣತಿಯನ್ನು ಹೊಂದಲು ಚರ್ಚಿಸುತ್ತಿದ್ದೇವೆ. ನಾವು 100 ವರ್ಷಗಳ ಹಿಂದೆ ಗಾಂಧೀಜಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ವೇಣುಗೋಪಾಲ್ ಹೇಳಿದರು.