6200 ಕಿಲೋ ಮೀಟರ್ ಗಳು…3 ತಿಂಗಳ ಅವಧಿ.. 14 ರಾಜ್ಯಗಳು..85 ಜಿಲ್ಲೆಗಳು..ಜಿಗ್ ಜಿಗ್ ರೂಟ್ ಮ್ಯಾಪ್..ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಸುತ್ತಿಗೆ ನಡೆಸುತ್ತಿರುವ ಯಾತ್ರೆಯ ಹೈಲೈಟ್ಸ್..
ಹೌದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸಿದ ಹುಮ್ಮಸ್ಸಿನಲ್ಲಿರುವ ರಾಹುಲ್ ಗಾಂಧಿ, ಇದೀಗ ಭಾರತ ನ್ಯಾಯ ಯಾತ್ರೆ ನಡೆಸೋದಕ್ಕೆ ಸಜ್ಜಾಗ್ತಿದ್ದಾರೆ. ಜನವರಿ 14ರಿಂದ ಯಾತ್ರೆ ಆರಂಭವಾಗಲಿದ್ದು ಮಾರ್ಚ 20ಕ್ಕೆ ಅಂತ್ಯಗೊಳ್ಳಲಿದೆ. ಮಣಿಪುರ ರಾಜ್ಯದಿಂದ ಯಾತ್ರೆ ಶುರುವಾಗಲಿದ್ದು ಮುಂಬೈನಲ್ಲಿ ಕೊನೆಗೊಳ್ಳಲಿದೆ.

ಈ ಯಾತ್ರೆಯ ವಿಶೇಷತೆಗಳೇನು? ಯಾತ್ರೆ ಸಾಗುವ ಮಾರ್ಗ ಏನು? ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ಯಾತ್ರೆಯ ಪ್ರಾಮುಖ್ಯತೆ ಏನು? ಅನ್ನೋದೇ ಇಂಟ್ರೆಸ್ಟಿಂಗ್.. ಭಾರತ್ ಜೋಡೋ ಯಾತ್ರೆ, ಕಾಂಗ್ರೆಸ್ ಪಾಲಿಗೆ ಸಾಕಷ್ಟು ಮೈಲೇಜ್ ನೀಡಿದೆ. ಇದೀಗ ಅದನ್ನೇ ಸ್ಟ್ರಾಟರ್ಜಿಯಾಗಿಸಿಕೊಂಡು ಮುಂಬರಲಿರುವ ಲೋಕಸಭೆಯನ್ನ ಟಾರ್ಗೆಟ್ ಮಾಡಿಕೊಂಡು ಮತ್ತೊಂದು ಯಾತ್ರೆಗೆ ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ಜೋಡೋ ಯಾತ್ರೆ ಲಂಭಕೋನದಲ್ಲಿತ್ತು. ಆದ್ರೆ ಈ ಭಾರತ್ ನ್ಯಾಯ್ ಯಾತ್ರೆ ಜಿಗ್ ಝ್ಯಾಗ್ ಮಾದರಿಯಲ್ಲಿ ಇರಲಿದೆ.
ಇನ್ನು ಈ ಯಾತ್ರೆಯ ರೂಟ್ ಮ್ಯಾಪ್ ನೋಡೋದಾದ್ರೆ, ಈಶಾನ್ಯ ರಾಜ್ಯ ಮಣಿಪುರದಲ್ಲಿ ಆರಂಭ ಆಗುವ ಯಾತ್ರೆ, ನಂತರ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯಕ್ಕೆ ತೆರಳಿ ಪಶ್ಚಿಮ ಬಂಗಾಳ ಪ್ರವೇಶಿಸಲಿದೆ. ಬಳಿಕ ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢಕ್ಕೆ ತೆರಳಿ ಆ ನಂತರ ಉತ್ತರ ಪ್ರದೇಶದತ್ತ ಸಾಗಲಿದೆ. ಉತ್ತರ ಪ್ರದೇಶದಿಂದ ಮತ್ತೆ ಮಧ್ಯ ಪ್ರದೇಶದತ್ತ ಹೊರಳುವ ಯಾತ್ರೆ, ಆ ಬಳಿಕ ರಾಜಸ್ಥಾನ, ಗುಜರಾತ್ ರಾಜ್ಯಗಳನ್ನು ತಲುಪಿ ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಕೊನೆಗೊಳ್ಳಲಿದೆ.

ಭಾರತ್ ಜೋಡೋ ಯಾತ್ರೆ ಸುಮಾರು 4,500 ಕಿ. ಮೀ. ದೂರ ಸಾಗಿತ್ತು. ಭಾರತದ ದಕ್ಷಿಣ ತುದಿಯಿಂದ ಉತ್ತರ ತುದಿಗೆ ನಡೆದ ಯಾತ್ರೆ ಇದಾಗಿತ್ತು. ಸಂಪೂರ್ಣ ಕಾಲ್ನಡಿಗೆಯಲ್ಲೇ ಯಾತ್ರೆ ಸಾಗಿತ್ತು. 136 ದಿನಗಳ ಕಾಲ ನಡೆದ ಭಾರತ್ ಜೊಡೋ ಯಾತ್ರೆಗೆ ಹಲವು ಕಡೆಗಳಲ್ಲಿ ಆಗಾಗ ಬಿಡುವು ಕೂಡಾ ನೀಡಲಾಗಿತ್ತು.
ಆದರೆ, ಭಾರತ ನ್ಯಾಯ ಯಾತ್ರೆಯ ಸ್ವರೂಪವೇ ಬೇರೆ. ಭಾರತ್ ಜೋಡೋ ಯಾತ್ರೆಗಿಂತಲೂ ಹೆಚ್ಚು ದೂರ ಸಾಗಿದರೂ ಕೂಡಾ ಬೇಗ ಮುಗಿಯಲಿದೆ. ಭಾರತ ದೇಶದ ಪೂರ್ವ ದಿಕ್ಕಿನಿಂದ ಪಶ್ಚಿಮಕ್ಕೆ ಸುಮಾರು 6,200 ಕಿ. ಮೀ. ದೂರವನ್ನ ರಾಹುಲ್ ಗಾಂಧಿ ಬಹುತೇಕ ಬಸ್ ಮೂಲಕ ಕ್ರಮಿಸಲಿದ್ದಾರೆ. ಅಲ್ಲಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಪಾದಯಾತ್ರೆ ಹಾಗೂ ಸಮಾವೇಶಗಳೂ ನಡೆಯಲಿವೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸಾಗಿ ಹೋದ ಮೂರ್ನಾಲ್ಕು ತಿಂಗಳ ಬಳಿಕ ಕರ್ನಾಟಕದಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ರಾಹುಲ್ ಗಾಂಧಿ ಅವರ ಯಾತ್ರೆಯೂ ಕಾರಣ ಎಂದು ಪಕ್ಷದ ನಾಯಕರು ಹೇಳ್ತಾರೆ.
ಲೋಕಸಭಾ ಚುನಾವಣೆ ಹೊತ್ತಲ್ಲೇ ಮೈ ಕೊಡವಿ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ, ಮತ್ತೊಂದು ಯಾತ್ರೆಗೆ ಸಿದ್ದವಾಗ್ತಿದೆ. ಅದೂ ಕೂಡಾ ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಬಲವಾಗಿ ಕೇಳಿ ಬಂದ ಬೆನ್ನಲ್ಲೇ ಯಾತ್ರೆಯ ಘೋಷಣೆ ಆಗಿದೆ. ಒಂದು ರೀತಿ ಹೇಳಬೇಕೆಂದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೈಪ್ ಕೊಡುವ ಯಾತ್ರೆಯೂ ಇದಾಗಬಹುದು!
ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿ ಕೂಟದ ಟಿಎಂಸಿ ಆಡಳಿತವಿದೆ. ಜಾರ್ಖಂಡ್ ರಾಜ್ಯದ ಜೆಎಂಎಂ ಹಾಗೂ ಬಿಹಾರದ ಮಹಾ ಘಟಬಂಧನ ಸರ್ಕಾರಗಳೆಲ್ಲವೂ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷಗಳು. ಒಡಿಶಾದ ಬಿಜೆಡಿ ಯಾವ ಮೈತ್ರಿ ಕೂಟದ ಜೊತೆಗೂ ಗುರ್ತಿಸಿಕೊಂಡಿಲ್ಲ. ಇನ್ನು ಛತ್ತೀಸ್‌ಗಢ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ! ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಕೂಡ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಲವೇ ಹೆಚ್ಚು.. ಹೀಗಾಗಿ, ಹಿಂದಿ ಬೆಲ್ಟ್‌ನಲ್ಲಿ ರಾಹುಲ್ ಗಾಂಧಿ ಯಾತ್ರೆ ಯಾವ ರೀತಿ ಪರಿಣಾಮ ಬೀರಬಲ್ಲದು ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಅನುಕೂಲ ಮಾಡಿಕೊಟ್ಟಿದ್ದರೆ, ಈ ಭಾರತ್ ನ್ಯಾಯ್ ಯಾತ್ರೆ ಮೂಲಕ ಲೋಕಸಭೆಗೆ ಮತದಾರರನ್ನ ಸೆಳೆಯೋ ಸ್ಟ್ರಾಟರ್ಜಿ ಅನ್ನೋದು ಅಷ್ಟೆ ವಾಸ್ತವ.