ರಾಜಕೀಯರಾಜ್ಯಸುದ್ದಿ

ಫಾರಿನ್ ಟೂರ್‌ಗೆ ಕಾಂಗ್ರೆಸ್ ಶಾಸಕರ ಬ್ರೇಕ್! ವಿದೇಶಕ್ಕೆ ಹೋಗದೆ ಇರಲು ಕಾರಣ..?

ಕಾಂಗ್ರೆಸ್ ಶಾಸಕರಲ್ಲಿ ಸದ್ಯ ವಿದೇಶ ಪ್ರವಾಸದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹಲವು ಶಾಸಕರು ಸದ್ಯದ ಸನ್ನಿವೇಶದಲ್ಲಿ ಪ್ರವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ರಾಜಕಾರಣದ ಕಾದುನೋಡುವ ತಂತ್ರಕ್ಕೆ ಶರಣಾಗಿರುವ ಶಾಸಕರು, ವಿದೇಶಕ್ಕೆ ಹೋಗುವ ಬದಲು ರಾಜ್ಯದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಮಾಗಡಿ ಶಾಸಕ ಬಾಲಕೃಷ್ಣ ಅವರು, ತಮಗೂ ವಿದೇಶ ಪ್ರವಾಸಕ್ಕೆ ಆಮಂತ್ರಣ ಬಂದಿದ್ದರೂ ತಾವು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಶುಸಂಗೋಪನಾ ಅಧ್ಯಯನಕ್ಕಾಗಿ ಶಾಸಕರು ವಿದೇಶಕ್ಕೆ ತೆರಳುತ್ತಿದ್ದು, ಅಲ್ಲಿ ಹಸುಗಳು ಎಷ್ಟು ಹಾಲು ಕರೆಯುತ್ತವೆ ಎಂಬುದನ್ನು ನೋಡಲು ಹೋಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಬಜೆಟ್ ಅನ್ನು ಮುಖ್ಯಮಂತ್ರಿಗಳು ಮಂಡಿಸುತ್ತಾರೆಯೇ ಹೊರತು ಶಾಸಕರಲ್ಲ, ಆದರೂ ಬಜೆಟ್ ಅಧಿವೇಶನದ ಸಮಯದಲ್ಲಿ ಶಾಸಕರು ಹಾಜರಿರುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಹಾದಿಯಲ್ಲಿ ಶಾಸಕ ಎನ್.ಹೆಚ್. ಕೋನರೆಡ್ಡಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ತಾವು ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ಬಜೆಟ್ ಮತ್ತು ಬಜೆಟ್ ಅಧಿವೇಶನ ಇರುವುದರಿಂದ ಸದ್ಯದ ಮಟ್ಟಿಗೆ ಪ್ರವಾಸದ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ತಾವು ಬರುವುದಾಗಿ ಹೇಳಿದ್ದರೂ, ಈಗಿನ ಸಂದರ್ಭದಲ್ಲಿ ಹೋಗದಿರಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ. ಪ್ರಸ್ತುತ ಯಾರು ಹೋಗುತ್ತಿದ್ದಾರೆ ಮತ್ತು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ತಮಗೆ ನಿಖರವಾದ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸದ್ಯಕ್ಕೆ ಪ್ರವಾಸಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ ಸದ್ಯ ಪ್ರವಾಸಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಏಪ್ರಿಲ್ ತಿಂಗಳ ನಂತರ ಪ್ರವಾಸಕ್ಕೆ ಹೋಗುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ಜವಾಬ್ದಾರಿಗಳೇ ತಮಗೆ ಮುಖ್ಯ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಪ್ರಮುಖ ಶಾಸಕರು ವಿದೇಶ ಪ್ರವಾಸಕ್ಕಿಂತ ಅಧಿವೇಶನ ಮತ್ತು ಕ್ಷೇತ್ರದ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕಂಡುಬರುತ್ತಿದೆ.

Comments (0)

Your email address will not be published. Required fields are marked *

Back to top button