ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮಾನ್ಯ ಮುಖ್ಯಮಂತ್ರಿಗಳು, ಯಾರೇ ಒಬ್ಬ ಸಚಿವರು ಒಂದೇ ಒಂದು ಗುದ್ದಲಿಪೂಜೆ ಮಾಡಿಲ್ಲ; ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ. ಹೊಸ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯವು ಭೀಕರ ಬರಗಾಲದಿಂದ ತತ್ತರಿಸಿದೆ. ಕೇಂದ್ರ ಸರಕಾರದಿಂದ ಅನುದಾನ ಬಂದರೂ ತಾಂತ್ರಿಕ ಕಾರಣಗಳನ್ನು ಒಡ್ಡಿ ರೈತರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಪರಿಹಾರ ಮೊತ್ತವನ್ನು ನೀಡಿಲ್ಲ. ಬೆಳೆ ವಿಮೆಯನ್ನೂ ಕೊಟ್ಟಿಲ್ಲ. ಇದು ರೈತರಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ ಎಂದು ವಿವರಿಸಿದರು.
ಈ ರಾಜ್ಯ ಸರಕಾರಕ್ಕೆ ರೈತಪರ ಕಾಳಜಿ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿತದ ಕುರಿತು ಇಡೀ ದೇಶದಲ್ಲಿ ಚರ್ಚೆ ಆಗಿದೆ. ಎಲ್ಲಿ ನೋಡಿದರೂ ಕೊಲೆಗಳು ನಡೆಯುತ್ತಿವೆ. ಚನ್ನಗಿರಿಯಲ್ಲಿ ಪೊಲೀಸರಿಗೇ ಪೊಲೀಸರು ರಕ್ಷಣೆ ಕೊಡಬೇಕಾದ ಸಂದರ್ಭ ಸೃಷ್ಟಿ ಆಗಿದೆ. ಮಟ್ಕಾ ದಂಧೆ ಯಥೇಚ್ಛವಾಗಿ ರಾಜ್ಯಾದ್ಯಂತ ನಡೆದಿದೆ. ಕಾನೂನುಬಾಹಿರ ದುಷ್ಕøತ್ಯಗಳು ಯಾರ ಭಯವೂ ಇಲ್ಲದೇ ನಡೆಯುತ್ತಿವೆ ಎಂದು ತಿಳಿಸಿದರು.
ಶಿಕ್ಷಣ ಸಚಿವರ ಹೇರ್ ಕಟಿಂಗ್‍ಗೆ ಹಣ ಸಂಗ್ರಹ..
ಲೋಕಸಭಾ ಚುನಾವಣೆ ಸಂಬಂಧ ದೊಡ್ಡ ನಿರಾಸೆ ಕಾಂಗ್ರೆಸ್ಸಿಗರಿಗೆ ಕಾದಿದೆ ಎಂದ ಅವರು, ಶಿಕ್ಷಣ ಸಚಿವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಅವರ ಹೇರ್ ಕಟಿಂಗ್‍ಗೆ ಹಣ ಸಂಗ್ರಹಿಸಿ ಕೊಡಲು ಯುವ ಮೋರ್ಚಾದವರಿಗೆ ಹೇಳುವೆ ಎಂದು ವಿಜಯೇಂದ್ರ ಅವರು ಪ್ರಶ್ನಗೆ ಉತ್ತರವಾಗಿ ತಿಳಿಸಿದರು.
ಒಬ್ಬರು ಶಿಕ್ಷಣ ಸಚಿವರು ಹೇಗಿರಬೇಕು? ಅವರು ಮಾದರಿ ಆಗಿರಬೇಕು. ನಮ್ಮ ಶಿಕ್ಷಣ ಸಚಿವರು ಒಂದು ಕಡೆ ನನಗೆ ಕನ್ನಡ ಬರುವುದಿಲ್ಲ ಎನ್ನುತ್ತಾರೆ. ಮತ್ತೊಂದು ಕಡೆ ಯಾವ ರೀತಿ ಅವಾಂತರ ಮಾಡಿದ್ದಾರೆಂಬುದು ನಿಮಗೂ ಗೊತ್ತಿದೆ. ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಶಿಕ್ಷಕರ ನೇಮಕಕ್ಕೆ ಖಾಸಗಿ ಕಾರ್ಮಿಕರನ್ನು ಗುತ್ತಿಗೆ ಮಾಡಿಕೊಳ್ಳುವವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಶಿಕ್ಷಣ ಸಚಿವರು ಎಷ್ಟು ಗಂಭೀರವಾಗಿ ಇಲಾಖೆಯನ್ನು ಪರಿಗಣಿಸಿದ್ದಾರೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಶಿಕ್ಷಕರು- ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಪೋಷಕರೂ ಚಿಂತೆಗೀಡಾಗಿದ್ದಾರೆ. ಇಂಥ ಶಿಕ್ಷಣ ಸಚಿವರು ಬೇಕೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದರು.
ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದರು. ಈ ಸರಕಾರ ಬಂದ ಬಳಿಕ ಕಳೆದ ಅಕ್ಟೋಬರ್‍ನಿಂದ 800 ಕೋಟಿಗೂ ಹೆಚ್ಚು ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ ಎಂದು ಟೀಕಿಸಿದರು.
ಎಸ್‍ಟಿ ಅಭಿವೃದ್ಧಿ ನಿಗಮದ 187 ಕೋಟಿಗೂ ಹೆಚ್ಚು ಮೊತ್ತದ ಹಗರಣ ನಿನ್ನೆ ನಡೆದಿದೆ. ಇಲಾಖೆ ಅಕೌಂಟೆಂಟ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಿಎಂ, ಡಿಸಿಎಂ ಕಳಕಳಿ, ಪ್ರಾಮಾಣಿಕತೆ ಎಲ್ಲಿ ಹೋಗಿದೆ? ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಿತಾಮಹರೆಂದು ರುಜುವಾತಾಗಿದೆ ಎಂದು ನುಡಿದರು.
ಇಲಾಖೆ ಸಚಿವರ ಮೌಖಿಕ ಆದೇಶದ ಮೇರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟಿನಲ್ಲಿ ತಿಳಿಸಿದ್ದು, ತಕ್ಷಣ ಆ ಸಚಿವರನ್ನು ತಮ್ಮ ಮಂತ್ರಿಮಂಡಲದಿಂದ ಕೈಬಿಡಬೇಕು; ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ಮಾಡಿ ಎಂದು ಆಗ್ರಹಿಸಿದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com