ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆ ಮಾಡಬಾರದು ಎಂಬ ಉದ್ದೇಶದಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕಳೆದ ವರ್ಷ ಸಂಭವಿಸಿದ ಅಹಿತಕರ ಘಟನೆಯ ನಂತರ ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೈದಾನದ ಸುರಕ್ಷತೆಯ ಬಗ್ಗೆ ತನಿಖೆ ನಡೆಸಿದ್ದ ಜಸ್ಟಿಸ್ ಕುನ್ಹಾ ಸಮಿತಿಯು ಹಲವು ಶಿಫಾರಸ್ಸುಗಳನ್ನು ನೀಡಿತ್ತು. ಈ ಬಗ್ಗೆ ವಿವರಿಸಿದ ಸಚಿವರು, ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಕೆಎಸ್‌ಸಿಎ ಗೆ ಸೂಚಿಸಲಾಗಿತ್ತು.
ಕೆಎಸ್‌ಸಿಎ ಪದಾಧಿಕಾರಿಗಳು ಮುಖ್ಯಮಂತ್ರಿಯವರನ್ನು ಮತ್ತು ನಮ್ಮನ್ನು ಭೇಟಿ ಮಾಡಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಮಾರ್ಚ್‌ನಲ್ಲಿ ಐಪಿಎಲ್ ಆರಂಭವಾಗುವುದರಿಂದ, ಅಷ್ಟರೊಳಗೆ ಅಲ್ಪಾವಧಿಯ ಷರತ್ತುಗಳನ್ನು ಪೂರೈಸಬೇಕೆಂದು ತಿಳಿಸಲಾಗಿದೆ ಎಂದರು. ಈಗಾಗಲೇ ಮೈದಾನದ ಗೇಟ್‌ಗಳನ್ನು ಕಿತ್ತುಹಾಕಿ ಸರಿಪಡಿಸುವ ಕೆಲಸ ಆರಂಭವಾಗಿದ್ದು, ಸರ್ಕಾರ ಮತ್ತೊಮ್ಮೆ ಪರಿಶೀಲನೆ ನಡೆಸಿದ ನಂತರವೇ ಅಂತಿಮ ಒಪ್ಪಿಗೆ ನೀಡಲಿದೆ.
ರಾಜೀವ್ ಗೌಡ ಅರೆಸ್ಟ್ ಆಗದ ವಿಚಾರವಾಗಿ ಮಾತನಾಡಿ, ನಾವು ಟೀಮ್ ರಚಿಸಿ ಹಿಡಿದುಕೊಂಡು ಬರಬೇಕು ಎಂದು ಸೂಚನೆ ನೀಡಿದ್ದೇವೆ. ಸಿಎಂ ಕೂಡ ಹೇಳಿದ್ದಾರೆ. ಇನ್ನೂ ರಾಜ್ಯದಲ್ಲಿ ಡ್ರಗ್ಸ್ ಹೆಚ್ಚಾಗಿರೋ ಸಂಬಂಧ ಸಿಎಂ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ, ಅದು ಒಳ್ಳೆಯದು. ಸಿಎಂ ಕಡೆಯಿಂದ ಬಂದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಎಲ್ಲಾ ಚರ್ಚೆ ಮಾಡಿ, ನಾನು ಕಠಿಣವಾಗಿಯೇ ಹೇಳಿದ್ದೇನೆ. ರಾಜ್ಯದ ಪೊಲೀಸರು ಎಲ್ಲ ಪೊಲೀಸರಿಗಿಂತ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹಾಗಂತ ಸಮಾಧಾನವಾಗಿ ಇರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ ವಿಚಾರವಾಗಿ, ಹಿಂದೇನೂ ಆ ರೀತಿಯ ಹೇಳಿಕೆ ವಿರೋಧ ಪಕ್ಷದಿಂದ ಬಂದಿತ್ತು. ಈಗ ದೂರು ಬಂದಿರೋದನ್ನ ಗಮನಿಸಿಲ್ಲ ಎಂದು ಹೇಳಿದ್ದಾರೆ.


