ಲೈಫ್ ಸ್ಟೈಲ್

ಕೈಗಳ ಅಂದ ಹೆಚ್ಚಿಸೋ ಕಲರ್ ಫುಲ್ ನೇಲ್ ಆರ್ಟ್; ಸ್ಟೈಲ್ ಜೊತೆ ಕೇರ್ ಕೂಡ ಇರಲಿ!

ಇಂದಿನ ಫ್ಯಾಷನ್ ಲೋಕದಲ್ಲಿ ಉಗುರುಗಳು ಕೇವಲ ದೇಹದ ಭಾಗವಲ್ಲ, ಅವು ನಮ್ಮ ಕ್ರಿಯೇಟಿವಿಟಿ ತೋರಿಸೋ ಒಂದು ಕ್ಯಾನ್ವಾಸ್ ಇದ್ದ ಹಾಗೆ. ಬರಿ ಒಂದು ಬಣ್ಣದ ನೇಲ್ ಪಾಲಿಷ್ ಹಚ್ಚೋ ಕಾಲ ಹೋಗಿ, ಈಗ ಉಗುರುಗಳ ಮೇಲೆ ಮುತ್ತು, ಹರಳು, ಬಳಸಿ ಅದ್ಭುತ ವಿನ್ಯಾಸ ಮಾಡೋದು ದೊಡ್ಡ ಟ್ರೆಂಡ್ ಆಗಿದೆ. ಇದನ್ನ ನಾವು ‘ಸೆಲ್ಫ್ ಎಕ್ಸ್‌ಪ್ರೆಷನ್’ ಅಂತಾನೂ ಕರೆಯಬಹುದು. ಆದರೆ ಈ ಗ್ಲಾಮರ್‌ನ ಹಿಂದೆ ನಾವು ಗಮನಿಸಲೇಬೇಕಾದ ಕೆಲವು ಕಹಿ ಸತ್ಯಗಳೂ ಇವೆ.ಕೈಗಳ ಅಂದ ಹೆಚ್ಚಿಸೋಕೆ ನೇಲ್ ಆರ್ಟ್ ಇವತ್ತು ಕ್ರೇಜ್ ಆಗಿರೋದು ನಿಜ, ಆದ್ರೆ ಇದರಲ್ಲಿ ಎಷ್ಟು ಚಂದ ಇದೆಯೋ ಅಷ್ಟೇ ರಿಸ್ಕ್ ಕೂಡ ಇದೆ. ನಮ್ಮ ಲುಕ್ ಗೆ ಒಂದು ರೇಂಜ್ ಕೊಡೋ ಈ ಉಗುರುಗಳ ಬಗ್ಗೆ ಸ್ವಲ್ಪ ಡೀಪ್ ಆಗಿ ತಿಳಿದುಕೊಳ್ಳೋದು ತುಂಬಾ ಇದೆ.

ಈ ಟ್ರೆಂಡ್‌ನಿಂದಾಗಿ ನಮ್ಮ ಕೈಗಳು ಕೇವಲ ಸ್ವಚ್ಛವಾಗಿ ಕಾಣುವುದಲ್ಲದೆ, ಯಾವುದೇ ಸಮಾರಂಭ ಅಥವಾ ಆಫೀಸ್ ಮೀಟಿಂಗ್‌ಗಳಲ್ಲಿ ಜನರ ಗಮನ ಸೆಳೆಯುವಂತೆ ಮಾಡುತ್ತವೆ. ಜೆಲ್ ನೇಲ್ಸ್, ಅಕ್ರಿಲಿಕ್ ಎಕ್ಸ್‌ಟೆನ್ಶನ್ ಮತ್ತು ಫ್ರೆಂಚ್ ಮ್ಯಾನಿಕ್ಯೂರ್‌ಗಳಂತಹ ಆಯ್ಕೆಗಳು ನಮಗೆ ದೀರ್ಘಕಾಲದವರೆಗೆ ಅಂದವಾದ ಉಗುರುಗಳನ್ನು ಹೊಂದುವಂತೆ ಮಾಡುತ್ತವೆ.

ಈ ನೇಲ್ ಆರ್ಟ್‌ನಿಂದ ಆಗುವ ಪಾಸಿಟಿವ್ ಇಂಪ್ಯಾಕ್ಟ್ ಎಂದರೆ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸರಿಯಾದ ವಿನ್ಯಾಸದ ಉಗುರುಗಳು ನಮ್ಮ ಒಟ್ಟಾರೆ ಸ್ಟೈಲ್‌ಗೆ ಒಂದು ಪರಿಪೂರ್ಣ ಫಿನಿಶಿಂಗ್ ಟಚ್ ನೀಡುತ್ತವೆ. ಮುಖ್ಯವಾಗಿ ಜೆಲ್ ಅಥವಾ ಅಕ್ರಿಲಿಕ್ ನೇಲ್ಸ್ ಬಳಸುವುದರಿಂದ ಉಗುರುಗಳು ಪದೇ ಪದೇ ಮುರಿಯುವುದು ತಪ್ಪುತ್ತದೆ ಮತ್ತು ಬಣ್ಣ ಬೇಗನೆ ಮಾಸುವುದಿಲ್ಲ. ಇದು ವೃತ್ತಿಪರ ಮಹಿಳೆಯರಿಗೆ ಮತ್ತು ಸದಾ ಬಿಜಿಯಾಗಿರುವವರಿಗೆ ಪದೇ ಪದೇ ಉಗುರುಗಳ ಆರೈಕೆ ಮಾಡುವ ತಲೆನೋವನ್ನು ಕಡಿಮೆ ಮಾಡುತ್ತದೆ.

ಆದರೆ ಈ ಸೌಂದರ್ಯದ ಹಿಂದೆ ಕೆಲವು ಅಪಾಯಗಳೂ ಇವೆ ಎಂಬುದು ನಮಗೆ ತಿಳಿದಿರಲಿ. ನೇಲ್ ಆರ್ಟ್ ಮಾಡುವಾಗ ಬಳಸುವ ಕೆಮಿಕಲ್‌ಗಳು ಮತ್ತು ಜೆಲ್ ಒಣಗಿಸಲು ಬಳಸುವ ಯು.ವಿ ಕಿರಣಗಳು ಚರ್ಮದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇವುಗಳಿಂದ ಚರ್ಮ ಡ್ರೈ ಆಗುವುದು ಅಥವಾ ಉಗುರುಗಳು ತಮ್ಮ ನೈಸರ್ಗಿಕ ಕಾಂತಿಯನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ನೇಲ್ ಆರ್ಟ್ ತೆಗೆಯುವಾಗ ಬಳಸುವ ಅಸಿಟೋನ್‌ನಂತಹ ದ್ರಾವಣಗಳು ಉಗುರುಗಳನ್ನು ಅತಿಯಾಗಿ ಒಣಗಿಸಿ ಅವುಗಳು ಸುಲಭವಾಗಿ ಸೀಳುವಂತೆ ಮಾಡಬಹುದು. ಸರಿಯಾದ ಸ್ವಚ್ಛತೆ ಇಲ್ಲದ ಕಡೆಗಳಲ್ಲಿ ಈ ಚಿಕಿತ್ಸೆ ಪಡೆದರೆ ಉಗುರುಗಳ ಇನ್ಫೆಕ್ಷನ್ ಆಗುವ ಭಯವೂ ಇರುತ್ತದೆ.

ಹೀಗಾಗಿ, ಉಗುರುಗಳ ಅಂದವನ್ನು ಕಾಪಾಡಿಕೊಳ್ಳುವಾಗ ಸ್ವಲ್ಪ ಜಾಗರೂಕತೆ ವಹಿಸುವುದು ಬಹಳ ಮುಖ್ಯ. ನೇಲ್ ಆರ್ಟ್ ಮಾಡಿಸಿಕೊಂಡ ನಂತರ ಉಗುರುಗಳಿಗೆ ಸ್ವಲ್ಪ ವಿಶ್ರಾಂತಿ ನೀಡುವುದು ಮತ್ತು ನಿಯಮಿತವಾಗಿ ಕ್ಯೂಟಿಕಲ್ ಆಯಿಲ್ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು. ಸಲೂನ್‌ಗಳಲ್ಲಿ ಈ ಕೆಲಸ ಮಾಡಿಸುವಾಗ ಅಲ್ಲಿನ ಪರಿಕರಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಮನೆಯಲ್ಲಿ ನೇಲ್ ಪಾಲಿಷ್ ಬಳಸುವಾಗ ಗುಣಮಟ್ಟದ ಬ್ರ್ಯಾಂಡ್ ಆರಿಸಿಕೊಳ್ಳಿ ಮತ್ತು ನೇರವಾಗಿ ಬಣ್ಣ ಹಚ್ಚುವ ಮೊದಲು ಬೇಸ್ ಕೋಟ್ ಹಾಕುವುದನ್ನು ಮರೆಯಬೇಡಿ. ಸ್ಟೈಲ್ ಮತ್ತು ಆರೋಗ್ಯ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡರೆ ಮಾತ್ರ ನಿಮ್ಮ ಉಗುರುಗಳು ದೀರ್ಘಕಾಲದವರೆಗೆ ಪಳಪಳ ಎಂದು ಹೊಳೆಯಲು ಸಾಧ್ಯ.

Comments (0)

Your email address will not be published. Required fields are marked *

Back to top button