ಹಾಸನ: ಸಿಎಂ ಸಿದ್ದರಾಮಯ್ಯ ಅವರು ಇಂದು ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.. ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಜೊತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಕಳೆದ ಎರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ದೇವಿ ದರ್ಶನ ಪಡೆಯುತ್ತಿದ್ದು, ಈ ಮೂಲಕ ಮೂರನೇ ಬಾರೀ ದೇವಿ ದರ್ಶನ ಪಡೆದುಕೊಂಡಿದ್ದಾರೆ.
ಇದೇ ವೇಳೆ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್.ಲತಾಕುಮಾರಿ, ದಕ್ಷಿಣ ವಯಲ ಐಜಿಪಿ, ಬೋರಲಿಂಗಯ್ಯ ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು. ಸಿಎಂ ಆಗಮನದ ಹಿನ್ನೆಲೆ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶಿವಲಿಂಗೇಗೌಡ ಹಾಗೂ ಜಿಲ್ಲಾಡಳಿತ ಅತ್ಯುತ್ತಮ ವ್ಯವಸ್ಥೆ ಮಾಡಿದೆ. ಎಲ್ಲರಿಗೂ ಧನ್ಯವಾದಗಳು, ಎಂದರು. ಪ್ರತಿವರ್ಷದಂತೆ ಈ ವರ್ಷವೂ ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದಿದ್ದೇನೆ. ದೇವಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದರು.
ಜೆಡಿಎಸ್ ಶಾಸಕರಿಂದ ಬಂದಿರುವ ಅನುದಾನ ತಾರತಮ್ಯ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಅಧಿಕಾರದಲ್ಲಿದ್ದಾಗ ಎಷ್ಟು ಅನುದಾನ ನೀಡಿದರು? ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಶಾಸಕರಿಗೆ ಎಷ್ಟು ಹಣ ಕೊಟ್ಟರು? ಈಗ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಡಿನ್ನರ್ ಪಾರ್ಟಿ ವಿವಾದ ಕುರಿತು ಸ್ಪಷ್ಟನೆ ನೀಡಿದ ಸಿಎಂ, ಆ ಔತಟ ಕೂಟಕ್ಕೆ ರಾಜಕೀಯ ಸಂಬಂಧ ಇಲ್ಲ. ನಾವು ಆಗಾಗ ಕೂಡಿ ಊಟ ಮಾಡುತ್ತೇವೆ. ಇದಕ್ಕೆ ರಾಜಕೀಯದ ಥಳುಕು ಹಾಕುವುದು ಬೇಡ, ಪಕ್ಷದ ಕಾರ್ಯ ಚಟುವಟಿಕೆ ಕುರಿತು ಚರ್ಚೆ ಮಾಡಿದ್ದೇವೆ ಅಷ್ಟೇ ಎಂದರು.
ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆ ಪಾರ್ಕ್, ಶಾಲೆ ಸೇರಿದಂತೆ ಸರ್ಕಾರಿ ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಳ್ಳಲು ನಿಷೇಧದ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆ ಕೊಡಬಾರದು. ತಮಿಳುನಾಡಿನ ಮಾದರಿ ಕ್ರಮಕ್ಕೆ ವರದಿ ಕೇಳಿದ್ದು ವರದಿ ಬಂದ ಬಳಿಕ ಪರಿಶೀಲಿಸಿ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಎಂದು ಹೇಳಿದರು. ಸಂಪುಟ ಪುನರ್‌ರಚನೆ ಬಗ್ಗೆ ಮಾತನಾಡಿದ ಅವರು, ಮೊದಲು ಬಿಹಾರ ಚುನಾವಣೆ ಮುಗಿಯಲಿ, ಆಮೇಲೆ ನೋಡೋಣ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ..


