ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅಭಿಮಾನಿಯೊಬ್ಬರು ನೀಡಿದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸ್ವೀಕರಿಸದೆ ವಾಪಸ್ ನೀಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ‘ಹಿಂದೂ ವಿರೋಧಿ ನಡೆ’ ಎಂದು ಕರೆದಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏನಿದು ವಿವಾದ?
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಿನಲ್ಲಿ ಬರುತ್ತಿದ್ದಾಗ, ಸಾರ್ವಜನಿಕರು ಮನವಿ ಪತ್ರಗಳನ್ನು ನೀಡಲು ಮುಗಿಬಿದ್ದಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಸಣ್ಣ ಫೋಟೋವೊಂದನ್ನು ಸಿಎಂ ಕೈಗೆ ನೀಡಿದ್ದಾರೆ. ಆದರೆ, ಫೋಟೋ ನೋಡಿದ ಕೂಡಲೇ ಸಿದ್ದರಾಮಯ್ಯ ಅದನ್ನು ವಾಪಸ್ ನೀಡಿ, ಅಭಿಮಾನಿಯನ್ನು ದುರುಗುಟ್ಟಿ ನೋಡಿದ್ದಾರೆ ಎನ್ನಲಾಗಿದೆ. ಆದರೆ, ಅದೇ ಹೊತ್ತಿನಲ್ಲಿ ಮತ್ತೊಬ್ಬ ಅಭಿಮಾನಿ ನೀಡಿದ ‘ಚಾಣಕ್ಯ’ ಕುರಿತಾದ ಪುಸ್ತಕವನ್ನು ಮಾತ್ರ ಅವರು ಆಸಕ್ತಿಯಿಂದ ಸ್ವೀಕರಿಸಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿವೆ.
“ಸಿದ್ದರಾಮಯ್ಯಗೆ ಹಿಂದೂ ದೇವರೆಂದರೆ ಅಲರ್ಜಿ”: ಆರ್. ಅಶೋಕ್ ಕಿಡಿ
ಈ ಘಟನೆಯ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಸಿಎಂ ಸಿದ್ದರಾಮಯ್ಯ ಅವರಿಗೆ ಹಿಂದೂ ದೇವರುಗಳು, ತಿಲಕ ಮತ್ತು ನಾಮ ಕಂಡರೆ ಆಗಿಬರುವುದಿಲ್ಲ. ಅವರಿಗೆ ಕೇವಲ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಿದ ಇವರಿಗೆ, ಈಗ ಹಿಂದೂಗಳ ಭಾವನೆಯನ್ನು ಕೆಣಕುವುದು ಚಾಳಿಯಾಗಿದೆ. ಬಹುಸಂಖ್ಯಾತ ಹಿಂದೂಗಳು ಇವರಿಗೆ ಪಾಠ ಕಲಿಸುವ ಕಾಲ ಹತ್ತಿರದಲ್ಲಿದೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ನಾಯಕ ಅಶ್ವತ್ಥನಾರಾಯಣ ಮಾತನಾಡಿ, “ಯಾರೇ ಆಗಲಿ ಪ್ರೀತಿಯಿಂದ ಏನನ್ನಾದರೂ ನೀಡಿದಾಗ ಅದನ್ನು ಸ್ವೀಕರಿಸುವುದು ಕನಿಷ್ಠ ಸೌಜನ್ಯ. ಜನರ ನಂಬಿಕೆ ಮತ್ತು ಭಾವನೆಗಳಿಗೆ ಗೌರವ ನೀಡುವುದು ಜನಪ್ರತಿನಿಧಿಯ ಜವಾಬ್ದಾರಿ. ಹಿರಿಯ ನಾಯಕರಿಂದ ನಾವು ಇಂತಹ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ,” ಎಂದು ಘಟನೆಯನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಈ ಹಿಂದೆ ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸಿದ್ದು ಮತ್ತು ಮೈಸೂರು ಪೇಟ ಧರಿಸಲು ಹಿಂದೇಟು ಹಾಕಿದ್ದು ಕೂಡ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈಗ ರಾಯರ ಫೋಟೋವನ್ನು ತಿರಸ್ಕರಿಸಿರುವುದು ಆ ವಿವಾದಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.


