ಬೆಂಗಳೂರು: ‘ದುನಿಯಾ’ ವಿಜಯ್ ನಟನೆಯ ಬಹುನಿರೀಕ್ಷಿತ “ಲ್ಯಾಂಡ್ ಲಾರ್ಡ್” ಸಿನಿಮಾ ಈಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದೆ. ಶನಿವಾರ ಸಿಎಂ ಅವರನ್ನು ಭೇಟಿಯಾದ ನಟ ದುನಿಯಾ ವಿಜಯ್ ಹಾಗೂ ಚಿತ್ರತಂಡ, ಸಿನಿಮಾ ವೀಕ್ಷಿಸುವಂತೆ ಪ್ರೀತಿಯ ಆಹ್ವಾನ ನೀಡಿದ್ದು, ಸಿಎಂ ಕೂಡ ಈ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ.
ಚಿತ್ರತಂಡದ ಭೇಟಿಯ ನಂತರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಫೋಟೋ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಸಿನಿಮಾದ ಕಥಾಹಂದರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಸಮಾಜದಲ್ಲಿನ ಜಾತಿ ಅಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಾಮಾಜಿಕ ಕಳಕಳಿಯ ಸಿನಿಮಾಗಳು ಬರುವುದು ಅಪರೂಪ,” ಎಂದು ಸಿಎಂ ಶ್ಲಾಘಿಸಿದ್ದಾರೆ. ಸಮಾಜದ ವಾಸ್ತವತೆಯನ್ನು ತೆರೆಯ ಮೇಲೆ ತರುತ್ತಿರುವ ಚಿತ್ರತಂಡದ ಪ್ರಯತ್ನವನ್ನು ‘ದಿಟ್ಟ ಹೆಜ್ಜೆ’ ಎಂದು ಕರೆದಿದ್ದಾರೆ.
ಸಿನಿಮಾ ವೀಕ್ಷಣೆಯ ಬಗ್ಗೆ ಭರವಸೆ ನೀಡಿರುವ ಸಿದ್ದರಾಮಯ್ಯ ಅವರು, “ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ” ಎಂದು ಜನತೆಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಶತದಿನೋತ್ಸವ ಆಚರಿಸಲಿ ಮತ್ತು ಇಂತಹ ಪ್ರೇರಣಾತ್ಮಕ ಚಿತ್ರಗಳು ಹೆಚ್ಚೆಚ್ಚು ಬರಲಿ ಎಂದು ಶುಭ ಹಾರೈಸಿದ್ದಾರೆ.
ಮುಖ್ಯಮಂತ್ರಿಗಳ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸಿನಿಮಾ ನೋಡಲು ಒಪ್ಪಿರುವುದರಿಂದ, ಚಿತ್ರತಂಡವು ಸಿಎಂ ಅವರಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.


