ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ: ಸಿಎಂಗೆ ಅಕ್ಕಾತಾಯಿಯ ಆಶೀರ್ವಾದ

ಲಕ್ಷ್ಮೀದೇವಿಗೆ ಕೇಳಿಕೊಂಡೀವಿ: ನಿಮಗೆ ಕಂಟಕ ಬರಲ್ಲ: ತಾಯಂದಿರ ಹಾರೈಕೆ

ಗೃಹಲಕ್ಷ್ಮಿ ಹಣದಲ್ಲಿ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿಗೆ ಸಿಎಂ ಸನ್ಮಾನ

ಬೆಳಗಾವಿ ಆ 26 : ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ ಎಂದು ರಾಯಬಾಗ್ ತಾಲ್ಲೂಕಿನ‌ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಮುಖ್ಯಮಂತ್ರಿಗಳಿಗೆ ಆಶೀರ್ವಾದ ಮಾಡಿದರು.

ಗೃಹಲಕ್ಷ್ಮಿ ಹಣದಲ್ಲಿ ಗ್ರಾಮಕ್ಕೇ ಹೋಳಿಗೆ ಊಟ ಹಾಕಿದ ಅಕ್ಕಾತಾಯಿ ಲಂಗೂಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ವಿಮಾನ‌ನಿಲ್ದಾಣದಲ್ಲಿ‌ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ‌ ಅಕ್ಕಾತಾಯಿ ಸಿಎಂಗೆ ತುಂಬು ಹೃದಯದಿಂದ ಆಶೀರ್ವದಿಸಿದರು.

ಕೈ ಮೇಲಾಗ್ಲಿ-ದೇಶ ಆಳು ದೊರೆಯೇ

ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ. ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದರು.

ಅಕ್ಕಾತಾಯಿ ಜೊತೆ ಬಂದಿದ್ದ ಮುತ್ತೈದೆಯರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ, ನಾವು ಲಕ್ಷ್ಮೀದೇವಿಗೆ ಪೂಜೆ ಮಾಡೀವಿ. ಕಂಟಕ ನಾಶ ಆಗ್ಲಿ ಅಂತ ದೇವಿಗೆ ಕೈಮುಗಿದೀವಿ ಎಂದು ಹಾರೈಸಿದರು.

ನಿಮ್ಮ ಆಶೀರ್ವಾದ ಹೀಗೇ ಇರಲಿ

ಅಕ್ಕಾತಾಯಿ ಮತ್ತು ಮುತ್ತೈದೆಯರ ಆಶೀರ್ವಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ನಿಮ್ಮ ಆಶೀರ್ವಾದ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಕ್ಕಾತಾಯಿ ಮತ್ತು ಮುತ್ತೈದೆಯರಿಗೆ ಸೀರೆ, ಅರಸಿನ ಕುಂಕುಮ ಬಾಗಿನ ನೀಡಿ ಸನ್ಮಾನಿಸಿದರು.

 

 

Leave a Reply

Your email address will not be published. Required fields are marked *

Verified by MonsterInsights