ಮೈಸೂರು: ಡಿನ್ನರ್ ನೆಪದಲ್ಲಿ ಚಾಮರಾಜನಗರದಲ್ಲಿರುವ ಸುನಿಲ್ ಬೋಸ್ ನಿವಾಸದಲ್ಲಿ ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮತ್ತು ಮಹಾದೇವಪ್ಪ ಮಂಗಳವಾರ ರಾತ್ರಿ ರಹಸ್ಯ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.
ಮೂವರು ಅಹಿಂದ ನಾಯಕರು ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೂ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆಯೇ ಸಭೆ ನಡೆಸಿದ್ದಾರೆ ಎನ್ನುವುದು ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ.
ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಮೂವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಇದೆ. ಯಾರಿಗೆ ಅವಕಾಶ ಸಿಕ್ಕಿದರೂ ಒಗ್ಗಟ್ಟಾಗಿಯೇ ಇರೋಣ. ಸಿದ್ದರಾಮಯ್ಯ ಇಳಿಸುವ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ನಾವು ಮೂವರು ತಡೆಯಬೇಕು. ಅನಿವಾರ್ಯವಾಗಿ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೇ ನಾವು ಒಟ್ಟಾಗಿ ಸಿಎಂ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ಬಾರಿ ನಾವೇ ಕಚ್ಚಾಡಿಕೊಂಡು ಇನ್ನೊಬ್ಬರಿಗೆ ಅವಕಾಶ ಸಿಗಬಾರದು.
2023ರ ಚುನಾವಣೆಯಲ್ಲಿ ಅಹಿಂದ ಮತಗಳಿಂದ ಕಾಂಗ್ರೆಸ್ ಸಾಕಷ್ಟು ಸ್ಥಾನ ಗೆದ್ದುಕೊಂಡಿದೆ. ಇದೇ ಕಾರ್ಡ್ ಹೈಕಮಾಂಡ್ ಮುಂದೆ ಪ್ಲೇ ಮಾಡಬೇಕು. ಬಹಿರಂಗವಾಗಿ ಯಾರ ಪರವಾಗಿ ಮತ್ತು ಯಾರ ವಿರುದ್ಧವೂ ಹೇಳಿಕೆ ನೀಡುವುದು ಬೇಡ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.