ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದಾಗಿ 10ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.. ಜಿಲ್ಲೆಯ ಕಹಾರ್ ಗ್ರಾಮದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ 4 ಜನರು ಸಾವನ್ನಪ್ಪಿದ್ದಾರೆ..
ಕಥುವಾ, ಸಾಂಬಾ, ದೋಡಾ, ಜಮ್ಮು ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದ ಬಳಿಕ ಈ ಘಟನೆ ಸಂಭವಿಸಿದೆ.. ಪ್ರತಿಕೂಲ ಹವಾಮಾನದ ದೃಷ್ಟಿಯಿಂದ ಜಮ್ಮು ವಿಭಾಗದಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ.
ತಾವಿ ನದಿ ಸೇರಿದಂತೆ ಹಲವು ನದಿಗಳು ಮತ್ತು ಹೊಳೆಗಳು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿವೆ, ಮತ್ತು ರಾತ್ರಿಯ ವೇಳೆಗೆ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಎತ್ತರದ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಝೀಲಂ ನದಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿಲ್ಲವಾದರೂ, ನೀರಿನ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ. ಮಧ್ಯ ಕಾಶ್ಮೀರದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಿದ್ದರೆ, ಉತ್ತರ ಕಾಶ್ಮೀರದಲ್ಲಿ ಹಗುರ ಮಳೆ ಅಥವಾ ಒಣಗಿದ ಹವಾಮಾನ ಕಂಡುಬಂದಿದೆ.