ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅಮಾನತು ಮಾಡಿದ್ದ ರಾಜ್ಯ ಸರ್ಕಾರ ನಾಲ್ವರ ಅಮಾನತು ಆದೇಶವನ್ನು ವಾಪಸ್ ಪಡೆದುಕೊಂಡಿತ್ತು. ಇದೀಗ ಈ ಬೆನ್ನಲ್ಲೇ ಅಮಾನತು ರದ್ದಾದ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಗದಿ ಮಾಡಿ ಮರು ನೇಮಕ ಮಾಡಿಕೊಂಡಿದೆ.
ಈ ಹಿಂದೆ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರನ್ನು ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಎಡಿಜಿಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇನ್ನೋರ್ವ ಕೇಂದ್ರ ವಿಭಾಗದ ಡಿಸಿಪಿ ಆಗಿದ್ದ ಶೇಖರ್ ಹೆಚ್.ಟಿ. ಅವರಿಗೆ ಗುಪ್ತಚರ ಇಲಾಖೆಯ ಎಸ್ಪಿ ಹುದ್ದೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ್ದು 11 ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದರು. ಈ ಕಾಲ್ತುಳಿತ ದುರಂತಕ್ಕೆ ಪೊಲೀಸ್ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಾಗಿತ್ತು. ಹೀಗಾಗಿ ಸರ್ಕಾರ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್, ಕೇಂದ್ರ ವಿಭಾಗದ ಡಿಸಿಪಿ ಆಗಿದ್ದ ಶೇಖರ್ ಹೆಚ್.ಟಿ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ASI ಬಾಲಕೃಷ್ಣ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಅಧಿಕಾರಿಗಳನ್ನು ಮರು ನೇಮಕ ಮಾಡಿಕೊಂಡಿದೆ.


