ಚೆನ್ನೈ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಚೆನ್ನೈ ಮತ್ತು ಕಾಂಚೀಪುರಂನಲ್ಲಿ ದಾಳಿ ನಡೆಸಿದೆ..
ಕೋಲ್ಮೀಫ್ ಕೆಮ್ಮಿನ ಸಿರಪ್ ಭಾರತದಾದ್ಯಂತ ಕನಿಷ್ಠ 22 ಮಕ್ಕಳ ಪ್ರಾಣಕ್ಕೆ ಕುತ್ತು ತಂದಿತ್ತು. ಹೀಗಾಗಿ ಶ್ರೇಸನ್ ಫಾರ್ಮಾ ಮತ್ತು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ 7 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕಂಪನಿ ಮತ್ತು ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ ಎರಡರಿಂದಲೂ ಅನೇಕ ನಿಯಮಗಳ ಉಲ್ಲಂಘನೆಯಾಗಿದೆ. ಕಳಪೆ ಮೂಲಸೌಕರ್ಯ ಮತ್ತು ಪುನರಾವರ್ತಿತ ಸುರಕ್ಷತಾ ಉಲ್ಲಂಘನೆಗಳ ಹೊರತಾಗಿಯೂ ಶ್ರೇಸನ್ 2011ರಲ್ಲಿ ಪರವಾನಗಿ ಪಡೆದಾಗಿನಿಂದ ಅನಿಯಂತ್ರಿತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತ್ತು.
ಹೀಗಾಗಿ ಇಡಿ ಅಧಿಕಾರಿಗಳು ಚೆನ್ನೈನ 7 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಇನ್ನು ಮಧ್ಯಪ್ರದೇಶ, ರಾಜಸ್ಥಾನದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದರು. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು.


