ತುಮಕೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ನೀಡುತ್ತಿರುವ ಶಾಶ್ವತ ಪರಿಹಾರವಲ್ಲ, ಬದಲಿಗೆ ಕನ್ನಡಿಗರನ್ನು ಸಾಲದ ಸುಳಿಗೆ ನೂಕುವ ತಂತ್ರ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ತುಮಕೂರು ಗ್ರಾಮಾಂತರದ ರಾಗಿಮುದ್ದೆನಹಳ್ಳಿಯಲ್ಲಿ ನಡೆದ ಆದಿಶಕ್ತಿ ಶ್ರೀ ಮಾರಮ್ಮ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗಾಗಿ ವರ್ಷಕ್ಕೆ ಸುಮಾರು ₹50,000 ಕೋಟಿ ಖರ್ಚು ಮಾಡುತ್ತಿದೆ. ಈ ಹಣಕ್ಕಾಗಿ ಸರ್ಕಾರ ಈಗಾಗಲೇ ಬರೋಬ್ಬರಿ ₹1.25 ಲಕ್ಷ ಕೋಟಿ ಸಾಲ ಮಾಡಿದೆ. ಈ ಸಾಲವನ್ನು ಗ್ಯಾರಂಟಿ ಘೋಷಿಸಿದ ನಾಯಕರು ತೀರಿಸುವುದಿಲ್ಲ. ಬದಲಿಗೆ ರಾಜ್ಯದ ಜನರೇ ತಮ್ಮ ತೆರಿಗೆಯ ಮೂಲಕ ತೀರಿಸಬೇಕಾಗುತ್ತದೆ. ನಿಮ್ಮ ತೆರಿಗೆ ಹಣವನ್ನೇ ನಿಮಗೆ ಮರಳಿಸಿ ಉಪಕಾರ ಮಾಡುತ್ತಿದ್ದೇವೆ ಎಂದು ಸರ್ಕಾರ ಬಿಂಬಿಸುತ್ತಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ನೀಡಲಾಗುತ್ತಿರುವ ಹಣದ ಬಗ್ಗೆ ಪ್ರಸ್ತಾಪಿಸಿದ ಅವರು, ತಾಯಿ-ತಂಗಿಯರು ತಿಂಗಳಿಗೆ ಸಿಗುವ ₹2000ಕ್ಕೆ ಮರುಳಾಗಬೇಡಿ. ಇದು ಕೇವಲ ತಾತ್ಕಾಲಿಕ ಉಪಶಮನವಷ್ಟೇ. ಈ ಹಣದಿಂದ ನಿಮ್ಮ ಬದುಕು ಶಾಶ್ವತವಾಗಿ ಹಸನಾಗುವುದಿಲ್ಲ. ದೂರದೃಷ್ಟಿ ಇಲ್ಲದ ಇಂತಹ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ” ಎಂದು ಎಚ್ಚರಿಸಿದರು.
ಒಂದೆಡೆ ಗ್ಯಾರಂಟಿ ಹೆಸರಲ್ಲಿ ಹಣ ಹಂಚುತ್ತಿದ್ದರೆ, ಇನ್ನೊಂದೆಡೆ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲದೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ಗ್ಯಾರಂಟಿಗಳು ಶಾಶ್ವತ ಪರಿಹಾರವಲ್ಲ ಎಂಬ ಸತ್ಯವನ್ನು ಜನರು ಅರ್ಥಮಾಡಿಕೊಳ್ಳುವ ಕಾಲ ಹತ್ತಿರದಲ್ಲಿದೆ” ಎಂದು ಕುಮಾರಸ್ವಾಮಿ ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


