ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶೈಕ್ಷಣಿಕ ಸೌಲಭ್ಯಗಳಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.. ಶಿಕ್ಷಣ ಇಲಾಖೆಯು ಈ ಬಾರಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಬದಲಿಗೆ ಚಪ್ಪಲಿ ನೀಡಲು ಚಿಂತನೆ ನಡೆಸಿದೆ. ಹವಾಮಾನ ವೈಪರೀತ್ಯ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ಬದಲಾವಣೆಗೆ ಇಲಾಖೆ ಮುಂದಾಗಿದೆ.
ಪ್ರತಿ ವರ್ಷ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ನೀಡಲಾಗುತ್ತಿತ್ತು. ಆದರೆ, ಬೇಸಿಗೆ ಮತ್ತು ಮಳೆಗಾಲದಲ್ಲಿ ಶೂ ಧರಿಸುವುದರಿಂದ ಮಕ್ಕಳಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.
ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ಸ್ಮೆಲ್ ಬರುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ದೀರ್ಘಕಾಲ ಶೂ ಧರಿಸಿದರೆ ಪಾದಕ್ಕೆ ಸೋಂಕು ತಗುಲುವ ಅಪಾಯವಿದೆ. ಬಿಸಿಲಿನಲ್ಲಿ ದೀರ್ಘಕಾಲ ಶೂ ಧರಿಸುವುದರಿಂದ ಪಾದಗಳಿಗೆ ಸೋಂಕು ತಗುಲುವ ಅಪಾಯವಿದೆ. ಈ ಎಲ್ಲಾ ತೊಂದರೆಗಳನ್ನು ತಪ್ಪಿಸಲು ಮತ್ತು ನಿರ್ವಹಣೆಗೆ ಸುಲಭವಾಗುವಂತೆ ಚಪ್ಪಲಿ ವಿತರಿಸುವುದು ಸೂಕ್ತ ಎಂಬ ಅಭಿಪ್ರಾಯ ಇಲಾಖಾ ಮಟ್ಟದಲ್ಲಿ ವ್ಯಕ್ತವಾಗಿದೆ.
ಎಲ್ಲಾ ಜಿಲ್ಲೆಗಳಿಗೂ ಈ ನಿಯಮ ಅನ್ವಯವಾಗುವ ಬದಲು, ಹವಾಮಾನಕ್ಕೆ ಅನುಗುಣವಾಗಿ ಎಲ್ಲಿ ಚಪ್ಪಲಿ ಅಗತ್ಯವಿದೆಯೋ ಅಂತಹ ಜಿಲ್ಲೆಗಳ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದೆ. ಉರ್ದು ಹಾಗೂ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯಕ್ಕೂ ಇದೇ ನಿರ್ದೇಶನ ನೀಡಲಾಗಿದ್ದು, ಬೇಡಿಕೆಗೆ ತಕ್ಕಂತೆ ಪಟ್ಟಿ ಸಿದ್ಧಪಡಿಸಲು ತಿಳಿಸಲಾಗಿದೆ.
ಹಳೆಯ ಯೋಜನೆಗೆ ಮರುಜೀವ?
ವಾಸ್ತವವಾಗಿ, 2015ರಲ್ಲೇ ಶೂ ಬದಲಿಗೆ ಚಪ್ಪಲಿ ನೀಡುವ ಪ್ರಸ್ತಾವನೆ ಇತ್ತು. ಆದರೆ ಕೆಲವು ಕಾರಣಗಳಿಂದ ಅದು ಜಾರಿಯಾಗಿರಲಿಲ್ಲ. ಇದೀಗ 10 ವರ್ಷಗಳ ಬಳಿಕ ಮತ್ತೆ ಈ ಯೋಜನೆಯನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ಶೂ ವಿತರಣೆಗಾಗಿ ಸರ್ಕಾರ 1 ರಿಂದ 5ನೇ ತರಗತಿಗೆ 265 ರೂ., 6 ರಿಂದ 8ಕ್ಕೆ 295 ರೂ. ಹಾಗೂ 9 ಮತ್ತು 10ನೇ ತರಗತಿಗೆ 325 ರೂ.ಗಳಂತೆ ಹಣ ನಿಗದಿಪಡಿಸಿದೆ. ಚಪ್ಪಲಿ ಯೋಜನೆಯೂ ಇದೇ ಆರ್ಥಿಕ ಮಿತಿಯೊಳಗೆ ಬರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಬಡ ವಿದ್ಯಾರ್ಥಿಗಳ ನೆರವಿಗೆ ಒತ್ತು
ಸರ್ಕಾರಿ ಶಾಲೆಗೆ ಬರುವ ಬಡ ವಿದ್ಯಾರ್ಥಿಗಳಿಗೆ ಪಾದರಕ್ಷೆ ನೀಡುವ ಮೂಲ ಉದ್ದೇಶ ಈ ಯೋಜನೆಯಲ್ಲಿದೆ. ಮಕ್ಕಳ ಸೌಕರ್ಯ ಮತ್ತು ಸುಲಭ ಬಳಕೆಗೆ ಚಪ್ಪಲಿ ಹೆಚ್ಚು ಸಹಕಾರಿ ಎಂಬುದು ಅಧಿಕಾರಿಗಳ ನಿಲುವು. ಇಲಾಖೆಯು ಅಂತಿಮ ಮಾಹಿತಿ ಕಲೆಹಾಕಿದ ಬಳಿಕ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.


