ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ‘ಜೋಡೆತ್ತಿ’ನ ರೀತಿ ಹೋರಾಡುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಚನ್ನಪಟ್ಟಣವೇ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ “ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಚನ್ನಪಟ್ಟಣ ಬಹುದೊಡ್ಡ ತಲೆ ನೋವಾಗಿದೆ. ಟಿಕೆಟ್ ಬಿಟ್ಟುಕೊಡುವ ವಿಷಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಸ್ಥಳೀಯ ನಾಯ ಕರ ನಡುವೆ ‘ಒಮೃತ’ ಮೂಡದಿರುವುದರಿಂದ ಚನ್ನಪಟ್ಟಣದ ಉಪಚುನಾವಣೆಯೇ ಮೈತ್ರಿಯಲ್ಲಿ ಬಿರುಕು ಮೂಡಿಸಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಯತ್ನಾಳ್ ಅವರು ನೀಡಿರುವ ‘ಪುನರ್ ಜನ್ಮ’ದ ಹೇಳಿಕೆ ಎಚ್.ಡಿ.ಕುಮಾರಸ್ವಾಮಿ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ‘ಈವರೆಗೆ ಬೇರ್ಪಡಿಸುವ ಮಾತಾಡಿಲ್ಲ” ಎನ್ನುವ ಮೂಲಕ ಇದೇ ರೀತಿ ಮುಂದುವರಿದರೆ ಎಲ್ಲವೂ ಸರಿಯಾಗಿರುವುದಿಲ್ಲ ಎನ್ನುವ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣ ಟಿಕೆಟ್ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಈಗಾಗಲೇ ಸರಣಿ ಸಭೆಗಳನ್ನು ನಡೆಸಿದ್ದಾರೆ. ‘ಟಿಕೆಟ್ ಯಾರಿಗೆ ಎಂಬ ಬಗ್ಗೆ ಬಿಜೆಪಿ ವರಿಷ್ಠರು ಶೀರ್ಮಾನಿಸಲಿದ್ದಾರೆ’ ಎನ್ನುವ ಮಾತನ್ನು ಉಭಯ ಪಕ್ಷದ ನಾಯಕರಾಡುತ್ತಿದ್ದರೂ, ಬಿಜೆಪಿಯಲ್ಲಿ ‘ಕ್ಷೇತ್ರ ಬಿಟ್ಟುಕೊಡಲಿ’ ಎನ್ನುವ ಬೇಡಿಕೆ ಶುರುವಾಗಿರುವುದು ಮೈತ್ರಿ ನಾಯಕರ ತಲೆಬಿಸಿಗೆ ಕಾರಣವಾಗಿದೆ.
ಚನ್ನಪಟ್ಟಣ ವಿಷಯದಲ್ಲಿ ಎರಡೂ ಪಕ್ಷಗಳ ಸ್ಥಳೀಯ ನಾಯಕತ್ವ ಹಾಗೂ ಕಾರ್ಯಕರ್ತರು “ಹೊಂದಾಣಿಕೆ” ಮಾಡಿಕೊಳ್ಳಲು ಸಿದ್ಧರಿಲ್ಲ, ಅದರಲ್ಲಿಯೂ ಸಿ.ಪಿ.ಯೋಗೇಶ್ವರ ಟಿಕೆಟ್ ಸಿಗದಿದ್ದರೆ ‘ಬಂಡಾಯ’ದ ಕಹಳೆ ಊದುವುದು ನಿಶ್ಚಿತ ಎನ್ನುವ ಸಂದೇಶ ರವಾನಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಹಿರಿಯ ನಾಯಕರು ಕುಮಾರಸ್ವಾಮಿ ಹಾಗೂ ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ ಶ್ರಮ ದೊಡ್ಡಮಟ್ಟದಲ್ಲಿದೆ. ಆದ್ದರಿಂದ ಇದೀಗ ಅವರಿಗೆ ಟಿಕೆಟ್ ಬಿಟ್ಟುಕೊಟ್ಟರೆ ತಪ್ಪಿಲ್ಲ ಎನ್ನುವ ಮಾತನ್ನು ಹೇಳುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
2 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ
ಪ್ರತಿಷ್ಠೆಯ ಕಣವಾಗಿರುವ ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಶಿಗ್ಗಾಂವಿಯಿಂದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಮತ್ತು ಸಂಡೂರಿನಲ್ಲಿ ಬಂಗಾರು ಹನಮಂತು ಅವರನ್ನು ಕಣಕ್ಕೆ ಇಳಿಸುತ್ತಿರುವುದಾಗಿ ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಆದರೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆಯಾಗಿಲ್ಲ. ಈ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಕುತೂಹಲ ಮೂಡಿಸಿದೆ.