ಚಾಮರಾಜನಗರ : ನಮ್ಮೂರ ಹುಡುಗರು ಭಾರೀ ಒಳ್ಳೇಯವರು, ಕೈತುಂಬಾ ಹಣ ಸಂಪಾದನೆ ಮಾಡ್ತಾರೆ ಹುಡುಗಿಕೊಡಿ ಸ್ವಾಮಿ….! ಹೀಗೆ ಗಡಿಜಿಲ್ಲೆ ಚಾಮರಾಜನಗರ ತಾಲೂಕಿನ ಗ್ರಾಮಸ್ಥರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಮದುವೆಯಾಗೋದಕ್ಕೆ ವಧುವನ್ನು ಹುಡುಕಿಕೊಂಡು ಊರೂರು ಸುತ್ತಿದ್ರೂ ಕೂಡ ಮದುವೆಯಾಗಲು ಹುಡುಗಿಯರು ಸಿಗ್ತಾ ಇಲ್ಲ. ವಧುವನ್ನರಸಿ ಕನ್ಯೆಯರ ಮನೆಗೆ ಹೋಗೋ ಹುಡುಗರಿಗೆ ಪೋಷಕರು ಕೇಳೋ ಸಾಮಾನ್ಯ ಪ್ರಶ್ನೆ ಒಂದೆ.. “ನಿಮ್ಮ ಹುಡುಗ ಸರ್ಕಾರಿ ನೌಕರಿಯಲ್ಲಿ ಇದ್ದಾನಾ” …. ಎಂಬ ಪ್ರಶ್ನೆ.
ಹೀಗಾಗಿ ಹತ್ತಾರು ಗ್ರಾಮಗಳಲ್ಲಿ ಹುಡುಕಾಡಿದರೂ ಮದುವೆಯಾಗಲು ಹುಡುಗಿಯರು ಸಿಗದೆ
ಈ ಭಾಗದ ಯುವಕರ ವಯಸ್ಸು 35ರಿಂದ 40 ದಾಟುತ್ತಿದೆ. ಹೀಗಾಗಿ ಚಾಮರಾಜನಗರದ ಅಟ್ಟಗುಳಿಪುರ ಗ್ರಾಮದಲ್ಲಿ ಅವಿವಾಹಿತ ಯುವಕರನ್ನು ಒಂದೆಡೆ ಸೇರಿಸಿ ಗ್ರಾಮದ ಮುಖಂಡರೊಬ್ಬರು “ನಮ್ಮುಡಗರು ಒಳ್ಳೇ ಹುಡುಗರು ..ಕಷ್ಟಪಟ್ಟು ದುಡಿತಾರೆ…ಕೈ ತುಂಬಾ ಸಂಪಾದನೆ ಮಾಡ್ತಾರೆ, ದಯವಿಟ್ಟು ಹುಡುಗಿಯರನ್ನು ಕೊಡಿ” ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆ ವಿಡಿಯೋ ಇದೀಗ ಗಡಿ ಜಿಲ್ಲೆಯಲ್ಲಿ ಸಖತ್ ವೈರಲ್ ಆಗಿದ್ದು ಭರ್ಜರಿ ಸದ್ದು ಮಾಡುತ್ತಿದೆ.


