
ಖ್ಯಾತ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರ ನಿರ್ಮಾಪಕರ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಿರಿಯ ನಿರ್ಮಾಪಕ ಕೆ. ಮಂಜು ಅವರು ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಬಿಎನ್ಎಸ್ ಸೆಕ್ಷನ್ 351 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಂದ್ರಚೂಡ್ ಅವರು ನಿರ್ಮಾಪಕರ ಬಗ್ಗೆ ಲಘುವಾಗಿ ಮಾತನಾಡಿ ಮಾನಹಾನಿ ಮಾಡಿದ್ದಾರೆ ಮತ್ತು ಬೆದರಿಕೆ ಹಾಕುವ ಮೂಲಕ ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು, ಆದರೆ ವಿಷಯದ ಗಾಂಭೀರ್ಯತೆಯನ್ನು ಪರಿಗಣಿಸಿ ಕೋರ್ಟ್ ಅನುಮತಿ ಪಡೆದ ನಂತರ ಈಗ ಅಧಿಕೃತವಾಗಿ ಎಫ್ಐಆರ್ ದಾಖಲಿಸಲಾಗಿದೆ. ಕನ್ನಡ ಚಿತ್ರ ನಿರ್ಮಾಪಕರ ಸಂಘದ ಪರವಾಗಿ ಕೆ. ಮಂಜು ಅವರು ಈ ಹೋರಾಟಕ್ಕಿಳಿದಿದ್ದು, ಚಂದ್ರಚೂಡ್ ಅವರ ಹೇಳಿಕೆಗಳು ಚಿತ್ರರಂಗದ ಘನತೆಗೆ ಧಕ್ಕೆ ತಂದಿವೆ ಎಂದು ದೂರಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಹೇಳಿಕೆ ಪಡೆಯಲು ಮತ್ತು ವಿಚಾರಣೆ ನಡೆಸಲು ಉಪ್ಪಾರಪೇಟೆ ಪೊಲೀಸರು ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.




