
ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಮತ್ತು ಉಪಾಸನಾ ದಂಪತಿಯ ಬಾಳಲ್ಲಿ ಸಂಭ್ರಮದ ಕ್ಷಣಗಳು ಬಂದಿವೆ. ಮದುವೆಯಾದ ಅನೇಕ ವರ್ಷಗಳ ನಂತರ ಎರಡು ವರ್ಷಗಳ ಹಿಂದೆ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದ ಈ ದಂಪತಿಗೆ ಈಗ ಅವಳಿ ಮಕ್ಕಳು ಜನಿಸಿದ್ದಾರೆ. ಜನವರಿ 31ರಂದು ಉಪಾಸನಾ ಅವರು ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಮೂಲಕ ರಾಮ್‌ಚರಣ್ ಕುಟುಂಬ ಈಗ “ಪರಿಪೂರ್ಣ” ಎಂಬ ಭಾವನೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಈ ಸಂತಸದ ಸುದ್ದಿಯನ್ನು ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಕುಟುಂಬವು ಅಪಾರ ಸಂತೋಷದಲ್ಲಿದ್ದು, ತಾಯಿ ಮತ್ತು ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕುಟುಂಬದ ಮೇಲೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ, ಆಶೀರ್ವಾದ ಮತ್ತು ಹಾರೈಕೆಗಳಿಗೆ ಚಿರಂಜೀವಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ದಂಪತಿಗೆ ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.




