ಗದಗ: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕದನದ ವಿಚಾರಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಮೊದಲು ಸಿಎಂ ಯಾರು ಎಂದು ಸ್ಪಷ್ಟ ಪಡಿಸಲಿ. ಆಮೇಲೆ ಕದನ ವಿರಾಮ ಮಾಡುತ್ತಾರೋ ಅಥವಾ ಸ್ವಯಂ ಘೋಷಣೆ ಮೂಲಕ ಅವರೇ ವಿರಾಮ ಆಗುತ್ತಾರೋ ಮುಖ್ಯವಲ್ಲ ಎಂದು ಹೇಳಿದ್ದಾರೆ..
ಗದಗ್ನಲ್ಲಿ ಮಾತನಾಡಿದ ಅವರು, ಕರ್ನಾಟಕ ಉಸ್ತುವಾರಿ ಸುರ್ಜೇವಾಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಲ್ಲರೂ ಸಿಎಂ ಆಗಿ ಮುಂದುವರಿಯುತ್ತಾರೆ ಸ್ಪಷ್ಟವಾಗಿ ಹೇಳಿಲಿ. ಅವರಿಗೆ ನೈತಿಕತೆ ಇದ್ದರೆ, ಸಂವಿಧಾನದ ಮೇಲೆ ಗೌರವವಿದ್ದರೆ ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂದಾದರೂ ಘೋಷಣೆ ಮಾಡಲಿ. ಅಥವಾ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ತೆಗೆಯುತ್ತೇವೆಂದಾರೂ ಹೇಳಲಿ ಎಂದು ಆಗ್ರಹಿಸಿದರು.
ಸಿಎಂ ಯಾರೆಂದು ಘೋಷಣೆ ಮಾಡಲಿ. ನೀವೇ ಗೊಂದಲ ಗೂಡು ಮಾಡಿಕೊಂಡಿದ್ದೀರಿ. ಅಧಿವೇಶನ ಆಗುವವರೆಗೆ ಕದನ ವಿರಾಮ ಎಂದು ನೀವೇ ಹೇಳುತ್ತೀರಿ. ಯಾರೆಂದು ಸ್ಪಷ್ಟಪಡಿಸಿದರೆ ಕದನ ವಿರಾಮ ಆಗಿಯೇ ಆಗುತ್ತದೆ. ಲಂಚ್ ಮೀಟಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಎನ್ನುವುದು ನಾಟಕವೇ? ನಾವು ಆಡುವುದು ನಾಟಕ ಎಂದಾದರೂ ಹೇಳಿ. ಅಧಿವೇಶನ ಮುಗಿದ ಮೇಲೆ ಮತ್ತೆ ನಾಟಕ ಪ್ರಾರಂಭ ಮಾಡುತ್ತಾರೆ, ಯಾವ ಪಾತ್ರಧಾರಿಗಳು ಯಾವ ವೇಷ ಹಾಕುತ್ತಾರೆಂದು ಎಲ್ಲವೂ ಹೊರಗಡೆ ಬೀಳಲಿದೆ. ಈ ಬಗ್ಗೆ ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು ಶ್ರೀರಾಮುಲು ಹೇಳಿದರು.
ಸಿದ್ದರಾಮಯ್ಯ ಬಗ್ಗೆ ಗೌರವವಿದೆ. ಆದರೆ ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವಂತೆ ನಮ್ಮ ರಾಜ್ಯದ ಪರಿಸ್ಥಿತಿಯಾಗಿದೆ. ರಾಜ್ಯದ ಜನರು ರೈತರು, ಕೂಲಿ ಕಾರ್ಮಿಕರು, ಬಡವರು, ಮಹಿಳೆಯರು ತೊಂದರೆಯಲ್ಲಿ ಸಿಲುಕಿದ್ದಾರೆ. ರಾಜ್ಯದಲ್ಲಿ ಆಡಳಿತ ವಿಫಲವಾಗಿದೆ ಎಂದರು.
ಸ್ಥಾನ ಬಿಟ್ಟುಕೊಡಬೇಕೆಂಬ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಸಿಎಂ ಮಾತು ತಪ್ಪದ ಮಗನಾಗುತ್ತಾರೋ ಅಥವಾ ಬಿಟ್ಟುಕೊಡಲಾರದೆ ಮಾತು ತಪ್ಪಿದ ಮಗನಾಗ್ತಾರೋ ಕಾದು ನೋಡಬೇಕಿದೆ. ಸಿದ್ದರಾಮಯ್ಯನವರು ಅಂದು ಮಾತು ಕೊಟ್ಟಿದ್ದರೆ ಮಾತು ತಪ್ಪದಂತೆ ನಡೆದುಕೊಳ್ಳಲಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.


