ಬೀದರ್: ಮರಾಠಾ ಸಮಾಜದ ಬಂಧುಗಳು ಕಷ್ಟದಲ್ಲಿದ್ದಾರೆ. ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಸಾಗೋಣ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಕರೆ ನೀಡಿದರು.
ಬೀದರ್ ನ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೀದರ್‌ಗೆ ಹಲವಾರು ಬಾರಿ ಬಂದಿದ್ದೆ. ಆಗ ನಮ್ಮ ಸಮಾಜದ ಮುಖಂಡರು ಸಂಘಟನೆ ಮಾಡಬೇಕು, ಸಮಾಜವನ್ನು ಒಂದು ಗೂಡಿಸಬೇಕು ಎಂದು ಮಾತನಾಡಿದ್ದೇವೆ ಈಗ ಕಾಲ ಕೂಡಿ ಬಂದಿದೆ. ಸಮಾಜದ ಎಲ್ಲಾ ಮುಖಂಡರು ಶ್ರದ್ಧೆಯಿಂದ ಕಷ್ಟ ಬಿದ್ದು ಸಮಾಜದ ಬಂಧುಗಳನ್ನು ಸೇರಿಸಿದ್ದೀರಾ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದರು.
ಛತ್ರಪತಿ ಶಿವಾಜಿ ಮಹಾರಾಜರು ಇಡೀ ವಿಶ್ವದಲ್ಲೇ ಜಾತ್ಯತೀತ ನಾಯಕರಾಗಿದ್ದರು. ಅವರು ಮೊಘಲರ ವಿರುದ್ಧವಿದ್ದರು. ಮುಸ್ಲಿಮರ ವಿರುದ್ಧ ಅಲ್ಲ. ಇದನ್ನು ನಾವು ತಿಳಿಯಬೇಕು ಎಂದರು. ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಹಾಯ ಮಾಡಿ ಲಂಡನ್‌ಗೆ ಹೋಗಿ ಉನ್ನತ ಅಧ್ಯಯನ ಮಾಡಲು ಸಹಾಯ ಮಾಡಿದವರು ನಮ್ಮ ಸಮಾಜದ ರಾಜರಾದ ಗಾಯಕ್ವಾಡ್ ಹಾಗೂ ಶಾಹು ಮಹಾರಾಜರು. ಅಂಬೇಡ್ಕರ್ ತಮಗೆ ದೊರೆತ ಸಹಾಯದಿಂದ ಹೊರ ದೇಶದಲ್ಲಿ ಓದಿ ಬಂದರು. ಪ್ರಪಂಚ ಕಂಡ ಬಹುದೊಡ್ಡ ಸುಧಾರಕರ ಅಂಬೇಡ್ಕರ್ ಅವರು ಎಂದು ಹೇಳಿದ್ದಾರೆ.

ಇಡೀ ಬೀದರ್ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮರಾಠ ಸಮಾಜದವರು ಇದ್ದಾರೆ. ನಾವು ಎಲ್ಲಾ ಸಮಾಜದ ಬಂಧುಗಳ ಜೊತೆಗೆ ಸಾಮರಸ್ಯದಿಂದ, ಅಣ್ಣ ತಮ್ಮಂದಿರಂತೆ ಬಾಳೋಣ. ಛತ್ರಪತಿ ಶಿವಾಜಿ ಮಹಾರಾಜರು, ಶಾಹು ಹಾಗೂ ಗಾಯಕ್ವಾಡ್ ಮಹಾರಾಜರು ಹೇಳಿದ ಮಾರ್ಗವನ್ನು ಅನುಸರಿಸೋಣ. ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ಅಂಬೇಡ್ಕರ್ ಹಾಗೂ ಬಸವಣ್ಣವರ ವಿಚಾರವನ್ನು ತಿಳಿಸೋಣ ಎಂದು ವಿವರಿಸಿದರು.

ನಮ್ಮ ಸಮಾಜದ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಓದಬೇಕು. ಸಮಾಜದ ಮುಖಂಡರು ಎಲ್ಲಾ ಪಕ್ಷಗಳನ್ನು ಬದಿಗೊತ್ತಿ ನಾನು ಮರಾಠ ಎಂಬ ಭಾವನೆ ಎಂದುಕೊಂಡು ಬಂದಿದ್ದಾರೆ ಎಂದರು. ಸಮಾವೇಶಕ್ಕೂ ಮುನ್ನ ಬೀದರ್ ನ ಶಿವಾಜಿ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಮಾಜ ಬಾಂಧವರು ಸಚಿವ ಲಾಡ್ ಅವರನ್ನು ಅದ್ದೂರಿಯಾಗಿ ಸ್ವಾಗತ ಕೋರಿದರು. ಛತ್ರಪತಿ ಶಿವಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಲಾಡ್ ಅವರು ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


