ಬೆಂಗಳೂರು: ಹೈಕಮಾಂಡ್ ಸೂಚನೆಯಂತೆ ಇಂದು ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ನಡೆದಿದ್ದು, ಡಿಕೆ ಶಿವಕುಮಾರ್ ಅವರು ಕೂಡ ಸಿಎಂ ಅವರನ್ನು ತಮ್ಮ ನಿವಾಸಕ್ಕೆ ಉಪಹಾರ ಸವಿಯಲು ಆಹ್ವಾನಿಸಿದ್ದರು..
ಅದರಂತೆ ಇಂದು ಸದಾಶಿವ ನಗರದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ನಾಟಿ ಕೋಳಿ ಸಾರು, ಇಡ್ಲಿ ಸವಿದು ಮೀಟಿಂಗ್ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ, ನಮ್ಮ ಮನೆಗೆ ಶನಿವಾರ ಉಪಾಹಾರಕ್ಕೆ ಬಂದಿದ್ದಾಗ ಡಿಕೆ ಶಿವಕುಮಾರ್ ಮಂಗಳವಾರ ಉಪಾಹಾರಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅದರಂತೆ ಬಂದಿದ್ದೇನೆ.
ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ಆರಂಭ ಆಗುತ್ತದೆ. ಅಧಿವೇಶನ ಹಿನ್ನೆಲೆ ನಾವು ಚರ್ಚೆ ಮಾಡಿದ್ದೇವೆ. ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಎದುರಿಸುತ್ತೇವೆ. ಪ್ರತಿಪಕ್ಷಗಳು ಅವಿಶ್ವಾಸ ನಿಲುವಳಿ ಮಂಡಿಸಲು ಮುಂದಾಗಿವೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಆ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಿಎಂ ತಿಳಿಸಿದರು.
ನಮ್ಮ ಸರ್ಕಾರ ಯಾವಾಗಲೂ ರೈತರ ಪರ ಇರುತ್ತದೆ. ರಾಜ್ಯದ ಸಮಸ್ಯೆ ಬಗ್ಗೆಯೂ ನಾನು, ಡಿಸಿಎಂ ಚರ್ಚೆ ಮಾಡಿದ್ದೇವೆ. ಕಬ್ಬಿಗೆ ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರ ಜತೆ, ಬೆಳೆಗಾರರ ಜತೆಗೂ ಚರ್ಚೆ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೆಕ್ಕೆಜೋಳ ರೈತರ ಸಮಸ್ಯೆ ಬಗ್ಗೆಯೂ ಚರ್ಚಿಸಿದ್ದೇವೆ. ಮೆಕ್ಕೆಜೋಳಕ್ಕೆ ಎಂಎಸ್ಪಿ ದರ 2,400 ರೂಪಾಯಿ ಇದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬೆಲೆ ಇದೆ. ರೈತರಿಗೆ ಎಂಎಸ್ಪಿ ದರ ಕೊಡುವುದಕ್ಕೆ ಒಪ್ಪಿಸಿದ್ದೇವೆ. ರೈತರಿಗೆ ಸಹಾಯ ಮಾಡೋಕೆನಿರ್ಮಾನಿಸಿದ್ದೇವೆ ಎಂದು ಸಿಎಂ ತಿಳಿಸಿದರು.
ಪಕ್ಷದ ಆಂತರಿಕ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಾನು, ಡಿಸಿಎಂ ನಡೆದುಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು. ಹೈಕಮಾಂಡ್ ಹೇಳಿದಂತೆ ಕೇಳಬೇಕೆಂದು ಮೊನ್ನೆಯೂ ಚರ್ಚೆ ಆಗಿತ್ತು. ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾನು, ಡಿ.ಕೆ.ಶಿವಕುಮಾರ್ ಸಹೋದರರೇ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಉಪಹಾರ ಸಭೆಗೆ ಮೊದಲು ನಾನೇ ಸಿಎಂ ಅವರನ್ನು ಆಹ್ವಾನಿಸಿದೆ. ಆದರೆ, ಅವರ ಮನೆಯಲ್ಲಿ ಮೊದಲ ಉಪಹಾರ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಪಕ್ಷ, ಸರ್ಕಾರ ಹಾಗೂ ಅಧಿವೇಶನದ ಬಗ್ಗೆ ಚರ್ಚೆ ನಡೆದಿದೆ. ಉತ್ತಮ ಆಡಳಿತ ನೀಡಲು ಹಾಗೂ ನಮ್ಮ ರಾಜ್ಯದ ನಿರಂತರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸುತ್ತೇವೆ. ಡಿಸೆಂಬರ್ 8 ರಂದು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು.


