ಬೆಂಗಳೂರು ಪಿಜಿಗಳಲ್ಲಿ ಚಪಾತಿ-ದೋಸೆಗೆ ಬ್ರೇಕ್, ಇನ್ನು ದಿನಕ್ಕೆ ಎರಡು ಹೊತ್ತು ಊಟ!

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತಲೆದೂರಿರುವ ಹಿನ್ನೆಲೆ, ನಗರದ ಪಿಜಿ ಮಾಲೀಕರಿಗೆ ‘ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ’ ಮಹತ್ವದ ಸಲಹೆಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಅಂದಾಜು 15 ರಿಂದ 25 ಸಾವಿರ ಪಿಜಿಗಳಿದ್ದು, ಅಡುಗೆ ಅನಿಲದ ಕೊರತೆಯಿಂದಾಗಿ ನಿವಾಸಿಗಳ ಆಹಾರ ಪೂರೈಕೆಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಾತ್ಕಾಲಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಅನಿಲ ಬಳಕೆಯನ್ನು ಮಿತಗೊಳಿಸುವ ಕುರಿತು ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಡೆತಡೆಯಿಲ್ಲದೆ ಆಹಾರ ಒದಗಿಸಲು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.
ಸಂಘವು ಸೂಚಿಸಿರುವ ಪ್ರಮುಖ ಕ್ರಮಗಳ ಪ್ರಕಾರ, ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಎರಡು ಬಾರಿ ಮಾತ್ರ ಊಟ ನೀಡಲು ಸಲಹೆ ನೀಡಲಾಗಿದೆ. ನಿವಾಸಿಗಳಿಗೆ ಅವಶ್ಯಕತೆ ಇದ್ದಲ್ಲಿ ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ವ್ಯವಸ್ಥೆ ಮಾಡಿಕೊಳ್ಳಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಮಾತ್ರ ಮೂರು ಹೊತ್ತು ಊಟ ನೀಡಲು ನಿರ್ಧರಿಸಲಾಗಿದೆ. ಅಡುಗೆ ಅನಿಲವನ್ನು ಹೆಚ್ಚು ಬಳಸುವ ದೋಸೆ, ಪೂರಿ, ಚಪಾತಿಯಂತಹ ಖಾದ್ಯಗಳನ್ನು ಸದ್ಯಕ್ಕೆ ಕೈಬಿಡುವಂತೆ ಸೂಚಿಸಲಾಗಿದ್ದು, ಗ್ಯಾಸ್ ಅವಲಂಬನೆಯನ್ನು ತಗ್ಗಿಸಲು 20 ಲೀಟರ್‌ನ ಎಲೆಕ್ಟ್ರಿಕ್ ರೈಸ್ ಕುಕ್ಕರ್‌ಗಳನ್ನು ಬಳಸಲು ಸಣ್ಣ ಮತ್ತು ಮಧ್ಯಮ ಪಿಜಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.
ಪಿಜಿ ನಿವಾಸಿಗಳಿಗೂ ಕೆಲವು ಹೊಸ ನಿಯಮಗಳನ್ನು ಅನ್ವಯಿಸಲಾಗಿದ್ದು, ವೈಯಕ್ತಿಕವಾಗಿ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಡುಗೆಗೆ ಅನಿವಾರ್ಯವಾದರೆ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಅನಿಲ ಉಳಿತಾಯಕ್ಕಾಗಿ ನೆರೆಹೊರೆಯ ಪಿಜಿಗಳು ಒಟ್ಟಾಗಿ ಒಂದೇ ಅಡುಗೆ ಮನೆಯಲ್ಲಿ ಆಹಾರ ತಯಾರಿಸಿ ಹಂಚಿಕೊಳ್ಳುವ ವಿಭಿನ್ನ ಪ್ರಯೋಗಕ್ಕೂ ಸಂಘವು ಚಾಲನೆ ನೀಡಿದೆ. ಒಂದು ವೇಳೆ ಕೊರತೆ ಇನ್ನೂ ಹೆಚ್ಚಾದಲ್ಲಿ, ಬೇಡಿಕೆ ಕಡಿಮೆ ಇರುವ ಸಣ್ಣ ಪಟ್ಟಣಗಳಿಂದ ಅನಿಲವನ್ನು ತರಿಸಿಕೊಳ್ಳುವ ಬಗ್ಗೆಯೂ ಮಾಲೀಕರು ಚಿಂತನೆ ನಡೆಸುತ್ತಿದ್ದಾರೆ.
ಸರ್ಕಾರವು ಈ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಡುಗೆ ಅನಿಲ ಉತ್ಪಾದನೆಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ ಮತ್ತು ಸಾರ್ವಜನಿಕರು ಆತಂಕದಿಂದ ಮುಗಿಬಿದ್ದು ಸಿಲಿಂಡರ್ ಖರೀದಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಸರ್ಕಾರವು ಸದ್ಯಕ್ಕೆ ಮನೆಬಳಕೆಯ ಎಲ್‌ಪಿಜಿ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೂ, ವಾಣಿಜ್ಯ ಬಳಕೆಯ ಮೇಲೆ ಅವಲಂಬಿತವಾಗಿರುವ ಪಿಜಿ ಉದ್ಯಮವು ಸಂಕಷ್ಟಕ್ಕೆ ಸಿಲುಕದಿರಲು ಸಂಘವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದು, ಪರಿಸ್ಥಿತಿ ಶೀಘ್ರವೇ ತಿಳಿಯಾಗುವ ನಿರೀಕ್ಷೆಯಿದೆ.




