ಬಾಲಿವುಡ್ನ ಖ್ಯಾತ ಹಿರಿಯ ನಟ ಧರ್ಮೇಂದ್ರ ಇಂದು ಉಸಿರು ಚೆಲ್ಲಿದ್ದಾರೆ.. 89 ವರ್ಷದ ಧರ್ಮೇಧ್ರ ಅವರು ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಅವರು ಇದೇ ಡಿಸೆಂಬರ್ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು. ಕೆಲ ದಿನಗಳ ಹಿಂದೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅನೇಕ ಬಾಲಿವುಡ್ ತಾರೆಯರು ಅವರನ್ನ ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದ್ದರು.
ಇದಾದ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಸಿ, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತ್ತು. ಆದರೇ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಇಂದು ಸಾವನ್ನಪ್ಪಿದ್ದಾರೆ. ಬಾಲಿವುಡ್ನಲ್ಲಿ ಧರ್ಮೇಂದ್ರ ಅವರು ‘ಹಿ ಮ್ಯಾನ್’ ಎಂದೇ ಫೇಮಸ್ ಆದವರು. ಅವರ ನಗು ಅದೆಷ್ಟೋ ಮಹಿಳಾ ಅಭಿಮಾನಿಗಳ ಮನಸ್ಸನ್ನು ಹೊಕ್ಕು ಛಿದ್ರ ಮಾಡಿತ್ತು. ಅವರು ತೆರೆಮೇಲೆ ಕಾಣಿಸಿಕೊಂಡರೆ ಮಹಿಳಾಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದರು.
ಹಲವು ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗವನ್ನ ಆಳಿದ ಧರ್ಮೇಂದ್ರ 1935ರ ಡಿಸೆಂಬರ್ 8ರಂದು ಪಂಜಾಬ್‌ನ ಲುಧಿಯಾನದ ಸಣ್ಣ ಹಳ್ಳಿಯಲ್ಲಿ ಜನಿಸಿದ್ರು. ಕಿರಿಯ ವಯಸ್ಸಿನಲ್ಲೇ ಪ್ರಕಾಶ್ ಕೌರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗದಲ್ಲಿ ಮಿಂಚಬೇಕು, ನಟನಾಗಬೇಕು ಎಂಬ ಹಂಬಲ ಹೊಂದಿದ್ದ ಧರ್ಮೇಂದ್ರ ನಟಿಸುವುದಕ್ಕಾಗಿಯೇ ಮನೆ ಬಿಟ್ಟು ಬಂದರು. 1960ರಲ್ಲಿ ʻದಿಲ್ ಬಿ ತೇರಾ ಹಮ್ ಬಿ ತೇರೆʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರಲ್ಲದೇ ʻಶೋಲೆʼ ಸಿನಿಮಾ ಮೂಲಕ ಕರ್ನಾಟಕದೊಂದಿಗೆ ನಂಟು ಹೊಂದಿದ್ದರು. ಇವರ ಕಲಾ ಸೇವೆಗೆ 2012ರಲ್ಲಿ ಪದ್ಮ ಭೂಷಣ ಪ್ರಶಸ್ತಿಯೂ ಒಲಿದುಬಂದಿತು.


