ಬೆಂಗಳೂರು: ರಾಜ್ಯದ ಪ್ರಭಾವಿ ಮಠದ ಸ್ವಾಮೀಜಿಯೊಬ್ಬರನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧಿಸಲಾಗಿದೆ.
ಸುಮಾರು ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ್ದ ಸ್ಪೂರ್ತಿ, ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿರುವುದಾಗಿ ಹೇಳಿಕೊಂಡು ಪರಿಚಯ ಬೆಳೆಸಿಕೊಂಡಿದ್ದಳು. ಇದಾದ ಕೆಲವೇ ದಿನಗಳಲ್ಲಿ ತನ್ನ ಅಸಲಿ ರೂಪ ತೋರಿಸಿದ ಆಕೆ, ಹಣ ನೀಡದಿದ್ದರೆ ಸ್ವಾಮೀಜಿಯವರ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಲು ಶುರು ಮಾಡಿದ್ದಳು ಎನ್ನಲಾಗಿದೆ.
ಆರೋಪಿ ಮಹಿಳೆಯ ಬೆದರಿಕೆಗೆ ಹೆದರಿದ ಸ್ವಾಮೀಜಿ, ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆಕೆಗೆ 4.5 ಲಕ್ಷ ರೂಪಾಯಿ ನೀಡಿದ್ದರು. ಆದರೂ ತೃಪ್ತಳಾಗದ ಸ್ಪೂರ್ತಿ, ತನ್ನ ಸಹಚರರೊಂದಿಗೆ ಸೇರಿ ಒಂದು ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಳು. ಅಷ್ಟೇ ಅಲ್ಲದೆ, ಹಣ ನೀಡದಿದ್ದರೆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಸತತವಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದಳು.
ಆರೋಪಿ ಮಹಿಳೆಯ ಕಿರುಕುಳ ತಾಳಲಾರದೆ ಸ್ವಾಮೀಜಿ ಅಂತಿಮವಾಗಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸೆರೆಹಿಡಿದಿದೆ.
ಕುತೂಹಲಕಾರಿ ಸಂಗತಿಯೆಂದರೆ, ಇದೇ ಸ್ವಾಮೀಜಿಯವರನ್ನು ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿತ್ತು. ಆ ಸಮಯದಲ್ಲಿ 6 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಈಗ ಮತ್ತೆ ಅದೇ ಮಾದರಿಯ ಬ್ಲ್ಯಾಕ್‌ಮೇಲ್ ಪ್ರಕರಣ ಮರುಕಳಿಸಿರುವುದು ಸಂಚಲನ ಮೂಡಿಸಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಗೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.


