Top Newsರಾಜಕೀಯರಾಜ್ಯ

ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಬಿಜೆಪಿ ಶಾಸಕನಿಗೆ ಜಾಮೀನು ನಿರಾಕರಣೆ, ಶೀಘ್ರವೇ ಬಂಧ

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಸಂಕಷ್ಟ ಎದುರಾಗಿದೆ. ಹೈಕೋರ್ಟ್ ಶಾಸಕರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು ಬಂಧನದ ಭೀತಿ ಎದುರಾಗಿದೆ. ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್ ವಿರುದ್ಧ ಈಗಾಗಲೇ ‘ಲುಕ್‌ಔಟ್‌’ ನೋಟಿಸ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಅವರು ಸಿಐಡಿ ಪೊಲೀಸರ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ತನಿಖೆಗಳ ಪ್ರಕಾರ, ಕಳೆದ ವರ್ಷ ಜುಲೈ 15ರಂದು ಹಲಸೂರಿನಲ್ಲಿ ನಡೆದ ರೌಡಿ ಬಿಕ್ಲು ಶಿವನ ಹತ್ಯೆಯ ಪ್ರಮುಖ ಸಂಚುಕೋರ ರೌಡಿ ಜಗ್ಗನೊಂದಿಗೆ ಶಾಸಕರು ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಹತ್ಯೆಗೂ ಮುನ್ನ ಇವರ ನಡುವೆ ಹತ್ತಾರು ಬಾರಿ ಭೇಟಿ ಮತ್ತು ಮಾತುಕತೆ ನಡೆದಿದೆ ಎನ್ನುವುದಕ್ಕೆ ಸಿಐಡಿ ಪೊಲೀಸರಿಗೆ ಕೆಲವು ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಶಾಸಕರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅನಿವಾರ್ಯ ಎಂದು ತನಿಖಾ ತಂಡ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದೆ.

ಶಾಸಕರು ವಿದೇಶಕ್ಕೆ ಪರಾರಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣಗಳಿಗೂ ಮಾಹಿತಿ ರವಾನಿಸಲಾಗಿದೆ. ಸದ್ಯ ಶಾಸಕರ ಪತ್ತೆಗಾಗಿ ಸಿಐಡಿ ಪೊಲೀಸರ ವಿಶೇಷ ತಂಡಗಳು ಹೊರರಾಜ್ಯಗಳಲ್ಲೂ ಶೋಧಕಾರ್ಯ ನಡೆಸುತ್ತಿವೆ. ಈ ಬೆಳವಣಿಗೆಯಿಂದಾಗಿ ಕೆ.ಆರ್.ಪುರಂ ಕ್ಷೇತ್ರದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button