ಬೆಂಗಳೂರು :
ಬಿ.ಎಸ್.ಯಡಿಯೂರಪ್ಪ ಎರಡು ಬಾರಿ ಸಿಎಂ ಆಗಿದ್ದರು. ಅಪ್ಪನ ಅಧಿಕಾರವನ್ನು ಮಗ ವಿಜಯೇಂದ್ರ ಚಲಾಯಿಸುತ್ತಿದ್ದಾರೆ ಎಂಬ ಟೀಕೆಯ ಮಳೆ. ನಂತರ ಬಿಎಸ್ವೈ ಪದತ್ಯಾಗವಾಯಿತು. ಲಿಂಗಾಯತರ ರಾಜಾಹುಲಿ ಶಿಕಾರಿಪುರ ಅಖಾಡದಿಂದ ನಿವೃತ್ತಿಯಾದರು. ಆಗ ವಿಜಯೇಂದ್ರಗೆ ಅಪ್ಪನ ಕ್ಷೇತ್ರದ ಟಿಕೆಟ್ ದಕ್ಕಿತು. ಬಲಿಷ್ಠ ಕಾಂಗ್ರೆಸ್ ಅಭ್ಯರ್ಥಿಯ ಅಚ್ಚರಿ ಬದಲಾವಣೆಯಾಯಿತು. ಅತ್ಯಲ್ಪ ಮತಗಳಿಂದ ಎಲೆಕ್ಷನ್ ಗೆದ್ದ ವಿಜಯೇಂದ್ರ ಕಡೆಗೂ ತಮ್ಮ 47 ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆಯಾದರು.
ನಂತರ ಬಿಜೆಪಿ ಸೋತು ಸುಣ್ಣವಾಯಿತು. ಆಂತರಿಕ ಕಲಹಕ್ಕೆ ಘಟಾನುಘಟಿಗಳೇ ಮಕಾಡೆ ಬಿದ್ದರು. ಸಿದ್ದು-ಡಿಕೆ ಜಂಟಿ ಕಾಳಗದಲ್ಲಿ ಕಾಂಗ್ರೆಸ್ ಗೆದ್ದು ಗದ್ದುಗೆ ಏರಿತು. ಗ್ಯಾರಂಟಿ ಘಮಲಲ್ಲಿ ಲೋಕಸಭೆ ಎಲೆಕ್ಷನ್ ನಲ್ಲಿ ಮೇಲುಗೈ ಸಾಧಿಸಲು ಮುಂದಾಗಿರುವ ಕೈ ಪಡೆ ಕಟ್ಟಿಹಾಕಲು ಇದೀಗ ಬಿಜೆಪಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ.
ಕಿರೀಟಧಾರಣೆಯಾಗಿ ವಿಜಯೇಂದ್ರ ಮೊದಲ ದಾಳ ಬೀಸಿದ್ದಾರೆ. ಪಕ್ಷದ ಪದಾಧಿಕಾರಿಗಳಾಗಿ ತಮ್ಮದೇ ಪಟಾಲಂ ಇರುವ ಪಟ್ಟಿಗೆ ಅನುಮೋದನೆ ಪಡೆದಿದ್ದಾರೆ. ತಮ್ಮನ್ನು ನಿರ್ಲಕ್ಷಿಸಿರುವ ವಿಜಯೇಂದ್ರ ವಿರುದ್ಧ ಕೆಲ ಹಿರಿಯ ಬಿಜೆಪಿ ನಾಯಕರಿಗೆ ಕೆಂಡದಂಥ ಕೋಪವಿದೆ. ಹಲವರು ಕೋಪಾವಿಷ್ಠತೆಯ ಕುದಿಮೌನದಲ್ಲಿದ್ದಾರೆ.
ಮಾಜಿ ಕೇಂದ್ರ ಸಚಿವ, ಹಿರಿಯ ಬಿಜೆಪಿಗ ಬಸನಗೌಡ ಪಾಟೀಲ್ ಯತ್ನಾಳ ಅವರು, ಗದ್ದುಗೆ ಏರಿದ ದಿನದಿಂದಲೇ ನಿರ್ದಯವಾಗಿ ವಿಜಯೇಂದ್ರರನ್ನು ಚಚ್ಚತೊಡಗಿದ್ದಾರೆ. ಅವನೊಬ್ಬ ‘ಚಿಂದಿಚೋರ್’ ಎಂದು ಉತ್ತರ ಕರ್ನಾಟಕದ ಕನಿಷ್ಠ ಬೈಗುಳ ಬಳಸಿದ್ದರು ಯತ್ನಾಳ್. ಇದೀಗ ‘ಕಳ್ಳ ಲಫಂಗ’ ಎನ್ನುವವರೆಗೂ ಮುಂದುವರಿದಿದ್ದಾರೆ. ಇದು ಕೇಳಿಸಿಕೊಂಡರೂ ಹೈಕಮಾಂಡ್ ಗಾಢಮೌನದ ಮೊರೆಹೋಗಿದೆ. ಅಷ್ಟೇ ಏಕೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನು ಹೀನಾಯಮಾನವಾಗಿ ಝಾಡಿಸ್ತಿದ್ದರೂ ರಾಜ್ಯದ ಹಿರಿಯ ಬಿಜೆಪಿ ನಾಯಕರು ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವಂತಿದ್ದಾರೆ.
ಇದು ಎಂ.ಪಿ ಎಲೆಕ್ಷನ್, ಮೋದಿ ಮೇನಿಯಾ ವರ್ಕ್ ಔಟ್ ಆಗುತ್ತೆ. ತ್ರಿರಾಜ್ಯಗಳ ಎಲೆಕ್ಷನ್ ನಂತೆ ಇಲ್ಲೂ ಮತ್ತೆ ಬಿಜೆಪಿ ಮ್ಯಾಜಿಕ್ ನಡೆಯುತ್ತದೆ. ಹಾಗಾಗಿ ಕಳೆದ ಬಾರಿಯಂತೆ ಬಿಜೆಪಿ ಗೆಲ್ಲಲಿದೆ. ಈ ಗೆಲುವನ್ನು ವರಿಷ್ಠರ ಪಾದಕ್ಕೊಪ್ಪಿಸಿ ನಾಯಕನಾಗಿ ಹೊರಹೊಮ್ಮಿಯೇ ಸಿದ್ದ ಎಂದು ವಿಜಯೇಂದ್ರ ಭರವಸೆಯ ಓಟದಲ್ಲಿದ್ದಾರೆ.
ಆದರೆ, ಎದುರಾಳಿಗಳ ವಿಶ್ಲೇಷಣೆ ಕಠೋರವಾಗಿದೆ. ಕಳೆದ ಬಾರಿ ಇದೇ ತಂಡ ಬಿಜೆಪಿ ವಿರುದ್ಧ ಲಿಂಗಾಯತರನ್ನು ಒಳಗೊಳಗೇ ಎತ್ತಿಕಟ್ಟಿತ್ತು. ಪರೋಕ್ಷವಾಗಿ ರಣಕಣದಲ್ಲಿ ನ್ಯೂಟ್ರಲ್ ಆಗಿತ್ತು. ಹಲವು ಬೆಂಬಲಿಗರನ್ನು ಪಕ್ಷ ಬಿಡಿಸಿತ್ತು. ಹಲವು ನಾಯಕರ ಸೋಲಿಗೆ ಸುಪಾರಿ ಕೊಟ್ಟಿತ್ತು. ಜಾತಿ ಬಿಟ್ಟು ಪಕ್ಷ ಕಟ್ಟುವ ಆರ್ಎಸ್ಎಸ್ ಮತ್ತು ವರಿಷ್ಠರ ಅಭೀಪ್ಸೆಗೆ ಅಡ್ಡನಿಂತಿತ್ತು. ಇದೆಲ್ಲವನ್ನೂ ದೊಡ್ಡವರು ಮರೆತಿಲ್ಲ. ಇದೆಲ್ಲ ಕಾರಣಕ್ಕಾಗಿಯೇ ‘ಕಳ್ಳನಿಗೆ ಚಾವಿ ನೀಡಿದ್ದಾರೆ’
ಎಂಬ ವಿಶ್ಲೇಷಣೆ ಶತೃಪಾಳೆಯದ್ದು.
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಡಿಸೆಂಬರ್ 27 ರ ಬುಧವಾರ ತಮ್ಮ ಕನಸಿನ ತಂಡದ ಮೊದಲ ಸಭೆ ಕರೆದಿದ್ದಾರೆ. ಲೋಕಸಭೆ ಯುದ್ದಕ್ಕೆ ರಣತಂತ್ರ ಹೆಣೆಯಲು ಹೊರಟಿದ್ದಾರೆ. ಇಂಥ ಹೊತ್ತಲ್ಲಿ ವಿಜಯೇಂದ್ರ ಸುತ್ತ ಬೊಮ್ಮಾಯಿ, ಈಶ್ವರಪ್ಪ, ಯತ್ನಾಳ್, ಅಶ್ವತ್ಥನಾರಾಯಣ, ಸಿಟಿ ರವಿ, ಸೋಮಣ್ಣ, ಕಾರಜೋಳ ಹೀಗೆ ಸಾಲು ಸಾಲು ಹಿರಿಯ ಅನುಭವಿಗಳಿದ್ದಂತಿಲ್ಲ. ಬದಲಿಗೆ ಸಿಮೆಂಟ್ ಮಂಜು, ಬೆಲ್ದಾಳೆ, ಮತ್ತಿಮಡು, ಧೀರಜ್ ಮುನಿರಾಜು ಇತ್ಯಾದಿ ಹೊಸಬರಿದ್ದಾರೆ. ಜತೆಗೆ ಸೋತ ರಾಜೀವ, ರಾಜುಗೌಡ, ನಂದೀಶ್ ರೆಡ್ಡಿ, ಪ್ರೀತಂ ಗೌಡ ಇತ್ಯಾದಿಗಳಷ್ಟೇ ಕಾಣುತ್ತಿದ್ದಾರೆ.
ಅಸೆಂಬ್ಲಿ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನು ಸೆಳೆಯಬೇಕು. ಸಂಪನ್ಮೂಲ ಕ್ರೋಡೀಕರಿಸಬೇಕು. ಬೈದವರನ್ನು ಬಂಧುಗಳೆನಬೇಕು. ಗರ್ವ ಮರೆತು ಹಿರಿಯರ ಪಾದಕ್ಕೆ ಶರಣೆನ್ನಲೇಬೇಕು. ಒಳೇಟು ವೀರರ ಜತೆ ಸಂಧಾನದಲ್ಲಿ ಯಶಸ್ಸು ಕಾಣಬೇಕು. ಏನೆಲ್ಲ ಅಡ್ಡಿಗಳ ಮಧ್ಯೆ ವಿಜಯೇಂದ್ರ ಯುದ್ಧ ಗೆಲ್ಲಲೇಬೇಕು. ಇಲ್ಲದಿದ್ದರೆ ಸಿಕ್ಕಚಾವಿ ‘ಚಾವಿ’ ಕಳೆದಹೋಗುವ ಭಯ.
ಯಡಿಯೂರಪ್ಪ ಎಂಬ ದೈತ್ಯ ರಾಜಕಾರಣಿಯ ಉತ್ತರಾಧಿಕಾರಿ ಆಗಲು ಹೊರಟ ವಿಜಯೇಂದ್ರ ಹಾದಿ ಅದೆಷ್ಟು ದುರ್ಗಮ…!