ಕಲಬುರಗಿ: ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದರಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಬಾರಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ಅವರ ಪರವಾಗಿ ಬೃಹತ್ ಜನಸಮಾವೇಶವನ್ನು ಉದ್ಘಾಟಿಸಿ, ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮುಖಂಡರುಗಳನ್ನು ಸ್ವಾಗತಿಸಿದ ಬಳಿಕ ಸಿಎಂ ಮಾತನಾಡಿದರು.
ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಸೋತಿದ್ದರಿಂದ ಖರ್ಗೆಯವರಿಗೆ ಹೆಚ್ಚು ನಷ್ಟ ಆಗಲಿಲ್ಲ. ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ. ಈ ಬಾರಿ ಮತ್ತೆ ತಪ್ಪಾಗಬಾರದು. ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
371ಜೆ ಜಾರಿ ಆಗೋದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಕಾರಣ. ಇವರ ಹೋರಾಟ, ಶ್ರಮದಿಂದಾಗಿ ಈ ಭಾಗಕ್ಕೆ 371ಜೆ ಜಾರಿಯಾಗಿ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಮಟ್ಟದ ವರದಾನವಾಗಿದೆ ಎಂದರು.
ಬಿಜೆಪಿಯವರು 371ಜೆ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ್ದರು. ಆದರೆ ಖರ್ಗೆಯವರ ಕಾರಣದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇದರ ಫಲವಾಗಿ 371ಜೆ ಈ ಭಾಗಕ್ಕೆ ದೊಡ್ಡ ಮಟ್ಟದ ಅನುಕೂಲ ಆಗಿದೆ ಎಂದರು.
KKRDB ಮೂಲಕ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 5000 ಕೋಟಿ ನೀಡಲಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ನುಡಿದಂತೆ ನಡೆದು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.
ಮೋದಿಯವರು ಹತ್ತತ್ತು ವರ್ಷ ಪ್ರಧಾನಿಯಾಗಿ ಬಡ ಭಾರತೀಯರ, ಮಧ್ಯಮ ವರ್ಗದ ಭಾರತೀಯರ ಪ್ರಗತಿಗಾಗಿ, ಏಳಿಗೆಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿ ಮಾಡಿದ ಉದಾಹರಣೆ ಇದ್ದರೆ ತೋರಿಸಿ ಎಂದು ಸಿಎಂ ಸವಾಲು ಹಾಕಿದರು.
ನಮ್ಮ ಗ್ಯಾರಂಟಿಗಳನ್ನು ಕದ್ದಿರುವ ಮೋದಿ ಮತ್ತು ಟೀಮು ಪರಮ ಸುಳ್ಳುಗಾರರು ಎನ್ನುವುದು ದೇಶದ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಆಗಿದೆ. ಸುಳ್ಳುಗಳ ಮೂಲಕ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡುವ ಬಿಜೆಪಿಯ ಅಭಿಯಾನಕ್ಕೆ ಬ್ರೇಕ್ ಹಾಕಿ ಎಂದು ಕರೆ ನೀಡಿದರು.
ಕಲ್ಬುರ್ಗಿ ಮತ್ತು ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಂದು ದಿನವೂ ಬಾಯಿ ಬಿಡದ ಬಿಜೆಪಿ ಸಂಸದರನ್ನು ಈ ಬಾರಿ ಸೋಲಿಸಿ ಎಂದು ಸಿ.ಎಂ. ಕರೆ ನೀಡಿದರು.