ಬೆಂಗಳೂರು: ರಾಜ್ಯದಲ್ಲಿ ಎರಡು ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣಗಳ ಸದ್ದು ಮಾಡುತ್ತಿದ್ದರೂ ನಾಮಕಾವಸ್ತೆಗೆ ಕಾಂಗ್ರೆಸ್ ವಿರುದ್ಧ ಆಗೊಂದು ಈಗೊಂದು ಹೋರಾಟ ಮಾಡುತ್ತಿರುವುದಕ್ಕೆ ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್ ಗರಂ ಆಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದ್ದರೆ, ಮುಡಾದಲ್ಲಿ ನಿವೇಶನಗಳ ಅಕ್ರಮ ಹಂಚಿಕೆಯಿಂದ 5 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ. ಎರಡು ಪ್ರಬಲ ಅಸ್ತ್ರಗಳು ಸಿಕ್ಕಿದ್ದರೂ ಪ್ರತಿಪಕ್ಷ ಬಿಜೆಪಿಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಮೈಕೊಡವಿ ಎದ್ದು ಹೋರಾಡುವ ಜೋಷ್ ಮಾಯವಾಗಿದ್ದಕ್ಕೆ ಹೈಕಮಾಂಡ್ ಸಿಟ್ಟಾಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಮುಡಾ/ವಾಲ್ಮೀಕಿ ಪ್ರಕರಣಗಳಲ್ಲಿ ಸಮರ್ಥ ಹೋರಾಟ ರೂಪಿಸಲು ವಿಫಲವಾಗಿದ್ದೀರಿ. ಮುಡಾ ಪ್ರಕರಣ ಕಾಂಗ್ರೆಸ್ ಒಳಗಡೆಯೇ ಭಾರೀ ಸುಂಟರಗಾಳಿ ಎಬ್ಬಿಸಿದೆ. ಇಷ್ಟೊಂದು ದೊಡ್ಡ ಸಂಚಲನ ಸೃಷ್ಟಿಸಿದ್ದರೂ ರಾಜ್ಯ ನಾಯಕರ ಉದಾಸೀನಕ್ಕೆ ರಾಜ್ಯ ಕೇಸರಿ ಪಡೆಗೆ ವರಿಷ್ಠರು ತಪರಾಕಿ ಹಾಕಿದ್ದಾರೆ.
ಪೇಸಿಎಂ/40% ಕಮೀಷನ್ ಆರೋಪದಲ್ಲಿ ಕಾಂಗ್ರೆಸ್ ಉಗ್ರ ಹೋರಾಟ ನಡೆಸಿತ್ತು. ಯಾವುದೇ ದಾಖಲೆಗಳು ಇಲ್ಲದೇ ಇದ್ದರೂ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಯಶಸ್ವಿಯಾಗಿತ್ತು. ಅವರ ಹೋರಾಟ ಹೇಗಿತ್ತು? ನಿಮ್ಮ ಹೋರಾಟ ಹೇಗಿದೆ? ಸಿಎಂ ಮತ್ತು ಅವರ ಕುಟುಂಬದ ಮೇಲೆಯೇ ಗಂಭೀರ ಆರೋಪ ಬಂದಿದೆ. ಸಿಎಂ ಕುರ್ಚಿಯನ್ನೇ ಅಲುಗಾಡಿಸುವಂತಹ ಅವಕಾಶ ನಿಮ್ಮ ಮುಂದಿದೆ. ಆದರೆ ನೀವು ಕೇವಲ ನಾಮ್‌ಕಾವಸ್ತೆ ಹೋರಾಟ ಮಾಡುತ್ತಿದ್ದೀರಿ. ಇದೆಲ್ಲ ನಡೆಯುವುದಿಲ್ಲ, ಇಷ್ಟೇ ಸಾಕಾಗುವುದಿಲ್ಲ. ಸಿಎಂ ರಾಜೀನಾಮೆಗೆ ಸನ್ನಿವೇಶ ಸೃಷ್ಟಿ ಆಗುವಂಥ ಹೋರಾಟ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಎರಡೂ ಪ್ರಕರಣಗಳಿಂದ ಜನ ಸಾಮಾನ್ಯರಿಗೆ ಸರ್ಕಾರದ ಮೇಲೆ ಅಪನಂಬಿಕೆ ಶುರುವಾಗಿದೆ. ಈ ಅವಕಾಶ ಬಳಸಿಕೊಂಡು ಜನಾಭಿಪ್ರಾಯ ರೂಪಿಸಿ. ಜನಾಕ್ರೋಶಕ್ಕೆ ಮಾತ್ರವೇ ಯಾವುದೇ ಸರ್ಕಾರ ಭಯ ಪಡಲಿದೆ. ನಿಮ್ಮ ಹೋರಾಟ ಮೂಲಕ ಅಂಥ ಸಂದರ್ಭಕ್ಕೆ ಪ್ರತಿಪಕ್ಷ ಆಗಿ ನೀವೇ ನಾಂದಿ ಹಾಡಿ. ಒಳ ಕಚ್ಚಾಟ ಬಿಟ್ಟು ಒಗ್ಗಟ್ಟಿನಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿ ಎಂದು ಖಡಕ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಚಳಿ ಬಿಡಿಸಿದೆ.