ರಾಜಕೀಯ

ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ವಿಧಾನಪರಿಷತ್ ಚುನಾವಣೆಯ ಕಾವು ಏರತೊಡಗಿದೆ. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅನುಭವಿ ನಾಯಕ ಸುಶೀಲ್ ಜಿ. ನಮೋಶಿ ಅವರಿಗೆ ಮತ್ತೆ ಮಣೆ ಹಾಕಲಾಗಿದ್ದು, 2020ರಲ್ಲೂ ಇವರು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಇನ್ನು ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಎಸ್.ವಿ. ಸಂಕನೂರ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದ್ದು, ಧಾರವಾಡ ಮತ್ತು ಗದಗ ಭಾಗದಲ್ಲಿ ಬಲವಾದ ಹಿಡಿತ ಹೊಂದಿರುವ ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಅವಕಾಶ ನೀಡಿದೆ.
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ದಾವಣಗೆರೆ ಮೂಲದ ಬಿಜೆಪಿ ಮುಖಂಡ ಕೆ.ಎಂ. ಸುರೇಶ್ ಅವರಿಗೆ ಟಿಕೆಟ್ ಘೋಷಿಸುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಆದರೆ, ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ತನ್ನ ಮಿತ್ರಪಕ್ಷವಾದ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಮೂಲಕ ರಾಜಧಾನಿಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲು ಬಿಜೆಪಿ ನಿರ್ಧರಿಸಿದ್ದು, ಮೈತ್ರಿ ಬಲ ಪ್ರದರ್ಶಿಸಲು ಸಜ್ಜಾಗಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಹಳೆ ಮುಖಗಳಿಗೆ ಹೆಚ್ಚು ಆದ್ಯತೆ ನೀಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಂಕನೂರ ಮತ್ತು ನಮೋಶಿ ಅವರಂತಹ ಹಿರಿಯ ನಾಯಕರನ್ನು ಕಣಕ್ಕಿಳಿಸುವ ಮೂಲಕ ಅನುಭವ ಮತ್ತು ಕ್ಷೇತ್ರದ ಮೇಲಿನ ಹಿಡಿತವನ್ನೇ ಬಿಜೆಪಿ ನಂಬಿಕೊಂಡಿದೆ. ಪ್ರಮುಖವಾಗಿ ಪದವೀಧರರು ಮತ್ತು ಶಿಕ್ಷಕರ ಮನ ಗೆಲ್ಲಲು ಈ ಅಭ್ಯರ್ಥಿಗಳು ಈಗಾಗಲೇ ತಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಮೈತ್ರಿಕೂಟದ ಒಗ್ಗಟ್ಟನ್ನು ಸಾರುವ ರಾಜತಾಂತ್ರಿಕ ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments (0)

Your email address will not be published. Required fields are marked *

Back to top button