ಬೆಂಗಳೂರು, ಮೇ 02 : ಬಿಜೆಪಿ ಮತ್ತು ಆರ್.ಎಸ್.ಎಸ್ ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಈ ಬಗ್ಗೆ ಅವರಿಗೆ ಬದ್ಧತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತೂಬಿನಕೆರೆ ಹೆಲಿಫ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನೂರು ವರ್ಷಗಳ ಇತಿಹಾಸ ನೋಡಿದರೆ ಅವರು ಯಾವಾಗಲೂ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಆಯೋಗದಿಂದ ಹಿಡಿದು ಇಂದಿನವರೆಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. ಆರ್.ಎಸ್.ಎಸ್.1925 ರಂದು ಪ್ರಾರಂಭವಾಗಿದ್ದು 2025 ಕ್ಕೆ ನೂರು ವರ್ಷಗಳಾಗುತ್ತಿದೆ.ಅವರು ಮೀಸಲಾತಿಯನ್ನು ಎಂದೂ ಒಪ್ಪಿಲ್ಲ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು
ರಾಹುಲ್ ಗಾಂಧಿಯವರು ಎರಡು ವರ್ಷಗಳಿಂದ ಈ ಬಗ್ಗೆ ಬಹಳ ಗಂಭೀರವಾಗಿ ಒತ್ತಾಯ ಮಾಡುತ್ತಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಸೇರಿಸಲು ಅವರೇ ಕಾರಣಕರ್ತರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದರು. ಈ ಎಲ್ಲರ ಹೋರಾಟ ಮತ್ತು ಒತ್ತಡದ ನಂತರ ಜಾತಿಗಣತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವಾಗ ಎಂದು ಸಮಯ ನಿಗದಿ ಮಾಡಿಲ್ಲ. ಜನಗಣತಿಯಲ್ಲಿಯೇ ಜಾತಿ ಗಣತಿಯನ್ನು ಮಾಡುವುದಾಗಿ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶೇ.50% ಗಿಂತ ಹೆಚ್ಚಬಾರದು ಎಂದು ಹೇಳಿದೆ. ಮೀಸಲಾತಿ 50% ಆದರೆ, ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದರು.
ಹಿಂದುಳಿದವರಿಗೆ ಮೀಸಲಾತಿ ಅತ್ಯಂತ ಅನಿವಾರ್ಯ ಮತ್ತು ಅಗತ್ಯ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕಾಗಿರುವುದು ಅತ್ಯಂತ ಅನಿವಾರ್ಯ ಮತ್ತು ಅಗತ್ಯ. ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಆಗ ಮಾತ್ರ ಜಾತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಲು ಆಗ್ರಹ
ಮೀಸಲಾತಿಯಲ್ಲಿ ಶೇ.50 ರಷ್ಟು ಗರಿಷ್ಠ ಪರಿಮಿತಿಯನ್ನು ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಬೇಕೆಂದು ಪ್ರಧಾನಿಗಳನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ನ್ಯಾ.ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸಬೇಕು
ಸಮೀಕ್ಷೆಯ ಸಮಯವನ್ನು ನಿಗದಿ ಮಾಡಬೇಕು. ನ್ಯಾಯಮೂರ್ತಿ ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ :
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಪದೇಪದೇ ಕೋಮು ಗಲಭೆಗಳಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಕೊಲೆ ಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಿದೆ. ಮನುಷ್ಯನ ಪ್ರಾಣ ಬಹಳ ಮುಖ್ಯ. ಕೂಡಲೇ ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.