ಬೆಂಗಳೂರು : ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರನ್ನೇ ಕಟ್ಟಿಹಾಕಬಹುದಾದ ಮಹತ್ವದ ಅಸ್ತ್ರವೊಂದು ಕಾಂಗ್ರೆಸ್ ಸರ್ಕಾರದ ಬತ್ತಳಿಕೆ ಸೇರಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಆಳ ಅಗಲ ಕಂಡು, ಹಾಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರೇ ಬೆಚ್ಚಿಬಿದ್ದಿದ್ದಾರೆ. ಡಿಸೆಂಬರ್ 29ರಂದು ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ನಿಗಮದ ಬೋರ್ಡ್ ಮೀಟಿಂಗ್ ನಡೆದಿದೆ. ಪ್ರಗತಿ ಪರಿಶೀಲನೆ ವೇಳೆ, ನಿಗಮದಲ್ಲಿ ಬರೋಬ್ಬರಿ 47 ಕೋಟಿ ಲೂಟಿ ಮಾಡಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಕೂಡಲೇ ಸಮಗ್ರ ತನಿಖಾ ವರದಿಗೆ ತನ್ನ ನಂಬಿಕಸ್ಥ ತನಿಖಾಧಿಕಾರಿಗೆ ಖುದ್ದು ಸೂಚನೆ ಕೊಟ್ಟಿರುವುದಾಗಿ ತಿಳಿದುಬಂದಿದೆ. ಜತೆಗೆ ಈ ಹಗರಣ ಕುರಿತ ಕೆಲ ಮಹತ್ವದ ದಾಖಲೆ ಹಾಗೂ ವಿವರಗಳು ಫ್ರೀಡಂ ಟಿವಿಗೆ ಲಭ್ಯವಾಗಿದ್ದು, ಈ ಭೋವಿ ನಿಗಮದ ಈ ಸ್ಕ್ಯಾಮ್ ಅನ್ನು ಕಾಂಗ್ರೆಸ್ ಸರ್ಕಾರ ಅಸ್ತ್ರವಾಗಿ ಬಳಸುವ ಸಾಧ್ಯತೆಗಳು ದಟ್ಟವಾಗಿವೆ.
ನಿಗಮದಲ್ಲಿ ನಡೆದಿದ್ದ ಬಹುಕೋಟಿ ಹಗರಣದ ತನಿಖೆಗೆ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು. ನಂತರ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜಕೀಯ ಪ್ರಭಾವದಿಂದ ಈ ತನಿಖೆ ಸ್ಥಗಿತಗೊಂಡಿತ್ತು. ತನಿಖಾಧಿಕಾರಿಯೂ ಬದಲಾಗಿದ್ದರು. ಇದೀಗ ಮತ್ತೆ ತನಿಖೆ ಶುರುವಾಗಿದೆ. ಮಾಜಿ ಸಚಿವರು ಹಾಗೂ ಹಾಲಿ ಎಮ್ಮೆಲ್ಸಿ ಒಬ್ಬರ ಹೆಸರುಗಳು ಹಗರಣದಲ್ಲಿ ತಳುಕುಹಾಕಿಕೊಳ್ಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನಕಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅವರಿಂದ ಆಧಾರ್, ಪ್ಯಾನ್ ಇತ್ಯಾದಿ ದಾಖಲೆಗಳನ್ನು ಪಡೆಯಲಾಗಿತ್ತು. ಅವರ ದಾಖಲೆಗಳಿಂದ ಸಿಮ್ ಗಳನ್ನು ಖರೀದಿ ಮಾಡಲಾಗಿತ್ತು. ಆ ನಂಬರ್ ನೀಡಿ ಅವರ ಹೆಸರಲ್ಲೇ ಖಾತೆ ತೆರೆದು ಫಲಾನುಭವಿಗಳ ಹೆಸರಲ್ಲಿ ಹಣ ರಿಲೀಸ್ ಆಗುತ್ತಿತ್ತು. ಇಂಥ ನಕಲಿ ಫಲಾನುಭವಿಗಳಿಗಾಗಿ ನಿಗಮದ ಕೇಂದ್ರ ಕಚೇರಿಯಿಂದ ಜಿಲ್ಲಾ ಮಟ್ಟದ ಕಚೇರಿಗೆ ಹಣ ವರ್ಗಾಯಿಸಲಾಗುತ್ತಿತ್ತು. ವಿವಿಧ ಯೋಜನೆಗಳಡಿ 3 ಲಕ್ಷ, 5 ಲಕ್ಷ, 10 ಲಕ್ಷ ಗಳಂತೆ ಹಣ ರಿಲೀಸ್ ಮಾಡಲು ಅವಕಾಶ ಇತ್ತು. ಆದರೆ ನಿಯಮ ಮೀರಿ ನಕಲಿ ವ್ಯಕ್ತಿಗಳಿಗೆ 10 ಲಕ್ಷಗಳಂತೆ ಕೋಟಿ ಕೋಟಿ ಹಣ ರಿಲೀಸ್ ಮಾಡಲಾಗಿತ್ತು.

ಜಿಲ್ಲಾ ಮಟ್ಟದಲ್ಲಿ ತಮ್ಮದೇ ಆದ ಪಾರ್ಟ್ ಟೈಂ ಕೆಲಸಗಾರರನ್ನು ಇಟ್ಟುಕೊಳ್ತಿದ್ದ ಅಧಿಕಾರಿಗಳು, ರಿಲೀಸಾದ ಹಣದಲ್ಲಿ ಫಲಾನುಭವಿಗೆ 10 ರಿಂದ 25 ಸಾವಿರ ನೀಡಿ ಉಳಿದ ಹಣವನ್ನು ತಮ್ಮ ಬೇನಾಮಿ ಕಂಪನಿಗಳ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ತಮಗೆ ಎಷ್ಟು ರಿಲೀಸ್ ಆಗಿದೆ ಎಂಬ ಮಾಹಿತಿ ಫಲಾಭವಿಗಳಿಗೂ ಗೊತ್ತಾಗ್ತಿರಲಿಲ್ಲ.
ಈ ಹಗರಣದ ಸಂಬಂಧ ನಿಗಮದ ಮೇಲೆ ಎಸಿಬಿ ಹಾಗೂ ಲೋಕಾಯುಕ್ತ ರೇಡ್ ಕೂಡಾ ನಡೆದಿತ್ತು. ಈ ವೇಳೆ ಆಗಿನ ಎಂ.ಡಿ. ಲೀಲಾವತಿ ಮತ್ತು ಜನರಲ್ ಮ್ಯಾನೇಜರ್ ನಾಗರಾಜಪ್ಪ ಎಂಬುವವರನ್ನು ಸಸ್ಪೆಂಡ್ ಕೂಡಾ ಮಾಡಲಾಗಿತ್ತು. ಸಸ್ಪೆಂಡ್ ಆಗಿದ್ದ ಈ ಇಬ್ಬರಿಗೆ ಕೆಲ ಪ್ರಭಾವಿಗಳು, ಹಿರಿಯ ಅಧಿಕಾರಿಗಳು, ಸೆಕರೇಟರಿಯೇಟ್ ನೌಕರರು ನೆರವಾಗಿದ್ದರು. ಹೀಗಾಗಿ ಸದರಿ ಹಗರಣದ ತನಿಖೆಯ ಉರುಳಲ್ಲಿ ಬಿಜೆಪಿ ಸರ್ಕಾರದಲ್ಲಿದ್ದ ಪ್ರಭಾವಿಗಳ ಹೆಸರು ತಳುಕುಹಾಕಿಕೊಳ್ಳುತ್ತಿದೆ. ಜತೆಗೆ ಈಗಿನ ಪರಿಷತ್ ಸದಸ್ಯರೊಬ್ಬರ ಪುತ್ರ ಈ ಬೇನಾಮಿ ವರ್ಗಾವಣೆಗಳ ಫಲಾನುಭವಿ ಎನ್ನುವುದು ಬ್ಯಾಂಕ್ ವ್ಯವಹಾರದ ಬಗ್ಗೆ ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ. ಜತೆಗೆ ಈ ಕೆಸರು ಭೋವಿ ಸಮುದಾಯದ ಕೆಲ ಪ್ರಮುಖರು, ಸಂಘ ಸಂಸ್ಥೆಗಳ ನಾಯಕರ ತಲೆಗೂ ಮೆತ್ತಿಕೊಳ್ತಿದೆ. ಈ ಹಗರಣ ಮುಚ್ಚಿಹಾಕಲು ಕಡತಗಳನ್ನು ಕದಿಯುವ ಕೆಲಸ ಸಹಾ ನಡೆದಿದ್ದು, ಬ್ಯಾಂಕ್ ವ್ಯವಹಾರದ ಆಧಾರದಲ್ಲಷ್ಟೇ ತನಿಖೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಜಾಪುರ, ರಾಯಚೂರು, ಚಿಕ್ಕಬಳ್ಳಾಪುರ, ಕೋಲಾರ ಹೀಗೆ ವಿವಿಧ ಜಿಲ್ಲಾ ಕಚೇರಿಗಳನ್ನು ಬಳಸಿಕೊಂಡು ಹಗರಣ ಎಸಗಲಾಗಿದೆ. ಹರಿಣಿತ ಕ್ರಿಯೇಷನ್ಸ್, ಸೋಮನಾಥ್ ಎಂಟರ ಪ್ರೈಸಸ್, ಅನ್ನಿಕಾ ಎಂಟರ್ ಪ್ರೈಸಸ್, ಶ್ರೀ ಸಾಯಿ ಥೆರಪಿಯಾಟಿಕ್ಸ್ ಇತ್ಯಾದಿ ಕಂಪನಿಗಳಿಗೆ ಕೋಟ್ಯಾಂತರ ರೂ. ವರ್ಗಾವಣೆ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ದುರ್ಬಲ ಸಮುದಾಯಗಳ ಅಭಿವೃದ್ಧಿಗಾಗಿ ಆರಂಭಿಸಲಾಗಿರುವ ಉಳಿದ ನಿಗಮಗಳಲ್ಲೂ ಇದೇ ರೀತಿಯ ಹಗರಣಗಳು ನಡೆದಿರುವ ಅನುಮಾನ ತನಿಖಾಧಿಕಾರಿಗಳಿಗೆ ಸಿಕ್ಕಿದೆ.

