ದೇಶದ ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರಿನಲ್ಲಿ ಉದ್ಭವಿಸಿದ ಕೆಲ ಪ್ರತ್ಯೇಕ ಪರಿಸ್ಥಿತಿಗಳು ಆಡಳಿತ ಪಕ್ಷಕ್ಕೆ, ವಿರೋಧಪಕ್ಷಗಳ ಬೆವರು ಇಳಿಸುತ್ತಿವೆ.ಬೆಂಗಳೂರು ವ್ಯಾಪ್ತಿಯ ನಾಲ್ಕು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಯಾವಾಗಲೂ ಕಡಿಮೆಯೇ ಇರುತ್ತದೆ. ಇದಕ್ಕೆ ಈ ಬಾರಿ ನೀರಿನ ಸಮಸ್ಯೆಯೂ ಜೊತೆಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಉದ್ಭವಿಸಿದ ನೀರಿನ ಸಮಸ್ಯೆ ರಾಜಕಾರಣಿಗಳನ್ನು ಕಂಗೆಡಿಸಿಬಿಟ್ಟಿದೆ.
ಈ ಬಾರಿ ವಲಸೆಜೀವಿಗಳು ನಿರ್ಣಾಯಕ; ರಾಜಕಾರಣಿಗಳಿಗೆ ಢವಢವ
ಬೆಂಗಳೂರು ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ರಾಜಕೀಯ, ಆರ್ಥಿಕ ಶಕ್ತಿ ಕೇಂದ್ರವಾದ ಬೆಂಗಳೂರನ್ನು ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಯಲ್ಲಿಯೂ ಶಕ್ತಿ ವಂಚನೆ ಇಲ್ಲದೇ ಪ್ರಯತ್ನಿಸುತ್ತವೆ.ಆದರೆ, ಸ್ಥಳೀಯೇತರರ ಪ್ರಾಬಲ್ಯವಿರುವ ಕಾರಣ ಮತದಾರರ ನಾಡಿಮಿಡಿತ ಅರಿಯುವುದು ಕಷ್ಟಸಾಧ್ಯ. ಸ್ಥಳೀಯ ರಾಜಕೀಯಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವಲಸೆಜೀವಿಗಳು ವ್ಯವಹರಿಸುತ್ತಾರೆ. ಈ ಕಾರಣಕ್ಕಾಗಿಯೇ ಪ್ರತಿಬಾರಿ ಮತದಾನ ಪ್ರಮಾಣ ಕಡಿಮೆ ಇರುತ್ತಿತ್ತು.
ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ.ಕಳೆದ 40 ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ.ಕೆಆರ್ಎಸ್ನಲ್ಲಿ ನೀರಿಲ್ಲದ ಕಾರಣ ಕೆಲವೆಡೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅಪಾರ್ಟ್ಮೆಂಟ್ಗಳಲ್ಲಿ ಪರಿಸ್ಥಿತಿ ಘೋರವಾಗಿದೆ. ಟ್ಯಾಂಕರ್ ನೀರಿಗೆ ಎರಡು ಸಾವಿರ ರೂಪಾಯಿವರೆಗೂ ಖರ್ಚು ಮಾಡುವ ಸನ್ನಿವೇಶ ಏರ್ಪಟ್ಟಿದೆ.
ಚುನಾವಣೆ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಂಭವ ಇದೆ. ಬೆಂಗಳೂರು ನಗರದಲ್ಲಿ ನೆಲೆಸಿರುವ ವಲಸೆಜೀವಿಗಳನ್ನು ಟೆನ್ಶನ್ಗೆ ಕಾರಣವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಮಗೆ ಮತ ನೀಡಿ ಎಂದುಅಪಾರ್ಟ್ಮೆಂಟ್ ನಿವಾಸಿಗಳನ್ನು ಕೇಳಲು ಅಭ್ಯರ್ಥಿಗಳು ಹೆದರುವಂತಾಗಿದೆ. ಬರೀ ಅಪಾರ್ಟ್ಮೆಂಟ್ ಮಾತ್ರವಲ್ಲ.. ಸ್ಲಂಗಳಿಗೂ ಹೋಗಲು ಹೆದರುವಂತಾಗಿದೆ. ಕೆಲವೆಡೆ ಮತ ಕೇಳಲು ಹೋದವರಿಗೆ ಈಗಾಗಲೇ ಆಕ್ರೋಶದ ಬಿಸಿಯೂ ತಾಕಿದೆ. ಇದು ನಿಶ್ಚಿತವಾಗಿಯೂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.
ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾರರು?
- ಬೆಂಗಳೂರು ಉತ್ತರ – 31.74 ಲಕ್ಷ
- ಬೆಂಗಳೂರು ದಕ್ಷಿಣ – 23.71 ಲಕ್ಷ
- ಬೆಂಗಳೂರು ಸೆಂಟ್ರಲ್ – 23.98 ಲಕ್ಷ
- ಬೆಂಗಳೂರು ಗ್ರಾಮಾಂತರ – 27.63 ಲಕ್ಷ
ಜಲ ರಾಜಕೀಯ
ಬೆಂಗಳೂರಿನಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಬೆಂಗಳೂರಿನ ನೀರಿನ ಸಮಸ್ಯೆಗೆ ಆಡಳಿತ ಪಕ್ಷ ಕಾಂಗ್ರೆಸ್ ಕಾರಣ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಯಾವುದೇ ಮುಂಜಾಗ್ರತೆ ವಹಿಸಿಲ್ಲ. ಟ್ಯಾಂಕರ್ ಮಾಫಿಯಾ ನಿಯಂತ್ರಿಸಿಲ್ಲ. ಕೆಆರ್ಎಸ್ನಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸುತ್ತಿದೆ ಎಂದು ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ನಡೆಸಿವೆ.
ಆದರೆ, ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾದ ಮೇಕೆದಾಟು ಪ್ರಾಜೆಕ್ಟ್ಗೆ ಕೇಂದ್ರ ಏಕೆ ಅನುಮತಿ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರ ಪ್ರಶ್ನೆ ಮಾಡುತ್ತಿದೆ. ಬರ ಪರಿಹಾರ ನೀಡಿಲ್ಲ. ಅನುದಾನ , ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಎಸಗುತ್ತಿದೆ. ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ನೀಡುತ್ತಿದೆ ಎಂದು ಆರೋಪಿಸಿ ಸರಣಿ ಜಾಹೀರಾತು ನೀಡುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಅಧಿಪತ್ಯ ಇರೋದು ಕಾಣುತ್ತೆ. 2009ರ ನಂತರ ಬೆಂಗಳೂರು ದಕ್ಷಿಣ, ಉತ್ತರ, ಸೆಂಟ್ರಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ. ಗ್ರಾಮಾಂತರದಲ್ಲಿ ಮಾತ್ರ ಬಿಜೆಪಿ ಗೆದ್ದಿಲ್ಲ.


