ಬೆಂಗಳೂರು: ಟ್ರಾಫಿಕ್ ಸಿಗ್ನಲ್, ದೇವಸ್ಥಾನ, ಬಸ್, ರೈಲು ನಿಲ್ದಾಣ, ಬಸ್ ನಿಲ್ದಾಣ, ಈಗ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲೂ ಭಿಕ್ಷಾಟನೆ ಶುರುವಾಗಿದೆ.
ಮೆಟ್ರೋದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸ್ಕಲ್ ಕ್ಯಾಪ್ ಧರಿಸಿದ ವಿಕಲಚೇತನ ವ್ಯಕ್ತಿಯೊಬ್ಬ ರೈಲಿನೊಳಗೆ ಪ್ರಯಾಣಿಕರ ಬಳಿ ಭಿಕ್ಷೆ ಬೇಡುತ್ತಿದ್ದು, ಪ್ರಯಾಣಿಕರೊಬ್ಬರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದೀಗ ವೈರಲ್ ಆಗಿದೆ.
ಈ ಭಿಕ್ಷುಕ ಪ್ರಯಾಣ ಮಾಡುವವರಂತೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಕೂಡ ಪಡೆದಿದ್ದಾನೆ. ಚಲಘಟ್ಟ ಟು ವೈಟ್ ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದಿರೋ ವ್ಯಕ್ತಿ, ಪ್ರಯಾಣಿಕರ ಬಳಿ ತನ್ನ ದೈಹಿಕ ಹೂನವನ್ನು ತೋರಿಸಿ ಭಿಕ್ಷೆ ಬೇಡಿದ್ದಾರೆ.
BMRCL ಮೂಲಗಳ ಪ್ರಕಾರ, ಶನಿವಾರ ಈ ಘಟನೆ ನಡೆದಿದೆ ಎಂದು ನಂಬಲಾಗಿದೆ. ಆದರೆ ನಿಖರವಾದ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.
ಈ ವ್ಯಕ್ತಿ ಎಲ್ಲಿಂದ ಹತ್ತಿದನೆಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸಿದಾಗ ಅವರು ಸ್ಕಲ್ ಕ್ಯಾಪ್ ಧರಿಸಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಇದು ಎರಡನೇ ಘಟನೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.