ಬೆಂಗಳೂರು: ವೇತನ ಬಾಕಿ ಮತ್ತು ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆ ರಾಜಧಾನಿಯಲ್ಲಿ ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ. ಕಳೆದ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ (Arrears) ಬಿಡುಗಡೆ ಹಾಗೂ 2024ರಿಂದ ಜಾರಿಗೆ ಬರಬೇಕಿರುವ ಹೊಸ ವೇತನ ಒಪ್ಪಂದಕ್ಕೆ ಆಗ್ರಹಿಸಿ ಈ ಹೋರಾಟ ರೂಪಿಸಲಾಗಿದೆ.
ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆಯೇ ಕೆಎಸ್ಆರ್ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ನೌಕರರಿಗೆ ಕಡಕ್ ಸೂಚನೆ ನೀಡಿದ್ದಾರೆ. ಜನವರಿ 29ರಂದು ಅನಿವಾರ್ಯ ಕಾರಣ ಹೊರತುಪಡಿಸಿ ಯಾವುದೇ ನೌಕರರಿಗೆ ರಜೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ‘ನೋ ವರ್ಕ್ ನೋ ಪೇ’ ನಿಯಮ ಅನ್ವಯಿಸಲಾಗುವುದು.
ಮುಷ್ಕರಕ್ಕೆ ಬೆಂಬಲ ನೀಡುವ ಅಥವಾ ಕಲಾಪಕ್ಕೆ ಅಡ್ಡಿಪಡಿಸುವ ನೌಕರರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ. ಪ್ರತಿಭಟನೆಯಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೂ, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ಅಲ್ಪಸ್ವಲ್ಪ ಏರುಪೇರಾಗುವ ಸಾಧ್ಯತೆಯಿದೆ. ನಾಳೆ ಸಂಜೆ 4 ಗಂಟೆಯೊಳಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ನೌಕರರ ಜಂಟಿ ಕ್ರಿಯಾ ಸಮಿತಿ ಎಚ್ಚರಿಸಿದೆ.


