ಬೆಂಗಳೂರು: ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಶುಕ್ರವಾರ ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿಯಿತು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ವಾತಾವರಣ ಕಾಣಿಸಿಕೊಂಡಿತ್ತು. ಸಂಜೆ 4 ಗಂಟೆ ಬಳಿಕ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ಸುಮಾರು 7 ಗಂಟೆಗೆ ಶುರುವಾದ ಮಳೆಯು ಕೋರಮಂಗಲ, ಮಡಿವಾಳ, ವಿಲ್ಸನ್​ ಗಾರ್ಡನ್​, ಡೇರಿ ಸರ್ಕಲ್​, ಜಕ್ಕೂರು, ಕೆ.ಆರ್​. ಮಾರುಕಟ್ಟೆ, ಮೆಜೆಸ್ಟಿಕ್​, ದಯಾನಂದನಗರ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಕತ್ತರಿಗುಪ್ಪೆ, ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ ಸೇರಿ ನಗರದ ಹಲವು ಭಾಗಗಳಲ್ಲಿ ಬಿರುಸಾಗಿ ಸುರಿಯಿತು.

ಕೆಲವೆಡೆ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು.ಮೇಲ್ಸುತುವೆಗಳಲ್ಲಿ ವಾಹನಗಳು ನಿಧಾನವಾಗಿ ಸಾಗಿದವು. ರಾಜಕಾಲುವೆಯಲ್ಲಿ ರಭಸದಿಂದ ನೀರು ಹರಿಯಿತು. ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿತು. ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಹೋಗುತ್ತಿದ್ದರೆ, ಇನ್ನೂ ಕೆಲವರು ಬಸ್​ನಿಲ್ದಾಣ, ಮರದ ಕೆಳಗಡೆ ನಿಂತು ಆಶ್ರಯ ಪಡೆದರು.

ಬೆಳ್ಳಂದೂರು, ಮಾರತ್ತಹಳ್ಳಿ, ವಿಶ್ವೇಶ್ವರಯ್ಯಪುರ, ಎಚ್​ಎಸ್​ಆರ್​ಲೇಔಟ್​, ರಾಮೋಹಳ್ಳಿ, ಚಾಮರಾಜಪೇಟೆ, ಅಡಕಮಾರನಹಳ್ಳಿ, ಚೋಳನಾಯಕನಹಳ್ಳಿಯಲ್ಲಿ ಇಲ್ಲಿಯವರೆಗೆ ಸರಾಸರಿ 10 ಮಿಮೀ ವರ್ಷಧಾರೆಯಾಗಿದೆ. ನಗರದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಮುಂದಿನ 2 ದಿನ ಮೋಡ ಕವಿಡ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿ.ಸೆ ಮತ್ತು 21 ಡಿ.ಸೆ. ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ:

ಮುಂಗಾರು ಮಳೆ ಈ ವರ್ಷ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದೆ. ಜೂನ್ 1ರಿಂದ ಆ.5ರವರೆಗೆ 185 ಮಿಮೀ ಮಳೆಯಾಗಬೇಕಿತ್ತು. ಆದರೆ, 245 ಮಿಮೀ ಬಿದ್ದಿದೆ. ಜೂನ್​ನಲ್ಲಿ 71 ಮಿಮೀ ಮಳೆ ಬದಲಾಗಿ 138 ಮಿಮೀ ಸುರಿದಿದೆ. ಜುಲೈನಲ್ಲಿ 94 ಮಿಮೀ ಮಳೆಯಾಗಬೇಕಿತ್ತು. ಆದರೆ, 78 ಮಿಮೀ ಸುರಿದಿದೆ. ಆಗಸ್ಟ್ 1ರಿಂದ 5ರವರೆಗೆ ಒಟ್ಟು 20 ಮಿಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights