ಬೆಂಗಳೂರು: ಯಾವುದೇ ಸರ್ಕಾರಿ ಆದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಬಿಡಿಎ PRO ಕೆ.ಎನ್.ವಿಜಯಾನಂದರನ್ನು BDAಯಿಂದ ಬಿಡುಗಡೆಗೊಳಿಸಿ ಬಿಡಿಎ ಉಪಕಾರ್ಯದರ್ಶಿ1 ಉಮೇಶ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸೋಮವಾರವಷ್ಟೇ ನಿಮ್ಮ ಫ್ರೀಡಂಟಿವಿ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ವಿಜಯಾನಂದರನ್ನು ಬಿಡಿಎಯಿಂದ ಎತ್ತಂಗಡಿ ಮಾಡಲಾಗಿದೆ. ಮಾತೃ ಇಲಾಖೆಗೆ ಹಿಂತಿರುಗುವಂತೆ ಆದೇಶ ಹೊರಡಿಸಲಾಗಿದೆ.
ವಾರ್ತಾ ಇಲಾಖೆ ಹೆಡ್ಡಾಫೀಸ್ ನಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಿಜಯಾನಂದರನ್ನು 3 ವರ್ಷದ ಹಿಂದೆ ಬಿಡಿಎನಲ್ಲಿದ್ದ ಖಾಲಿ PRO ಹುದ್ದೆಗೆ ಹೆಚ್ಚುವರಿಯಾಗಿ ಹಾಕಲಾಗಿತ್ತು.ಆದರೆ, ಇವರನ್ನು 2025ರ ಜುಲೈ 30ರಂದು ಸಹಾಯಕ ನಿರ್ದೇಶಕ ಹುದ್ದೆಯಿಂದ ಸ್ಥಳ ತೋರಿಸದೇ ವರ್ಗಾಯಿಸಲಾಗಿತ್ತು. ಆದರೂ, ವಿಜಯಾನಂದ ಸರ್ಕಾರದ ಆದೇಶಕ್ಕೆ ತಲೆಬಾಗದೆ, ಬಿಡಿಎ ನಲ್ಲಿಯೇ ಮುಂದುವರೆದಿದ್ದರು. ಬಿಡಿಎ ವಾಹನದಲ್ಲಿ ಓಡಾಡುತ್ತಾ, ಕಡತಗಳಿಗೆ ಸಹಿ ಮಾಡುತ್ತಿದ್ದರು.
ಅಧಿಕೃತವಾಗಿ ಹುದ್ದೆಯೇ ಇಲ್ಲದ ಮೇಲೆ, ಯಾವ ರೀತಿ ಬಿಡಿಎ ನಲ್ಲಿ PRO ಹುದ್ದೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲವೋ ಅಥವಾ ವಿಜಯಾನಂದ ಅವರೇ ಸರ್ಕಾರಕ್ಕೆ ಸೆಡ್ಡು ಹೊಡೆದ್ದಿದ್ದಾರೋ ಅನ್ನೋದು ಬಿಡಿಎ, ವಾರ್ತಾ ಇಲಾಖೆ ನೌಕರರ ಪ್ರಶ್ನೆಯಾಗಿತ್ತು.
ಈ ಬಗ್ಗೆ ಫ್ರೀಡಂಟಿವಿಯು ಶ್ರೀ ವಿಜಯಾನಂದರ ಪ್ರತಿಕ್ರಿಯೆ ಕೇಳಿದಾಗ ಅವರು ಹೀಗೆ ಹೇಳಿದ್ರು. “ನಾವೆಲ್ಲೂ ಕಾನೂನು ಮೀರಿ ಎಲ್ಲೂ ಕೆಲಸ ಮಾಡಲ್ಲ.. ನಾನು ರಿಲೀವ್ ಮಾಡ್ಲಿ ಅಂತಾನೆ ಕಾಯ್ತಾ ಇದ್ದೀನಿ. ರಿಲೀವ್ ಮಾಡಿದ ತಕ್ಷಣ ಹೊರಡ್ತೀನಿ. ಈ ರೀತಿ ಸುದ್ದಿ ಮಾಡುವಾಗ ಸ್ವಲ್ಪ ಕಾನೂನು ತಿಳ್ಕೊಳಿ. ರಿಲೀವ್ ಮಾಡ್ದೇನೆ ನಾನು ಆ ಜಾಗದಿಂದ ಹೋಗಲು ಆಗುತ್ತಾ? ನಮ್ಮ ಆಯುಕ್ತರ ಕಚೇರಿಯಿಂದ ಮೂಮೆಂಟ್ ಆರ್ಡರ್ ನಾ ಕೊಡುವಾಗ ರಿಲೀವ್ ಮಾಡಿಲ್ಲ” ಎಂದು ಖಡಕ್ಕಾಗಿ ಹೇಳಿದ್ದರು.
ಇಲ್ಲಿ ಕಾನೂನು ತಿಳ್ಕೊಬೇಕಿರೋದು ವಿಜಯಾನಂದ ಅವರೋ? ಅಥವಾ ಬಿಡಿಎ ಕಮೀಷನರ್ ಅವರೋ? ವಾರ್ತಾ ಇಲಾಖೆ ಆಯುಕ್ತರೋ? ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ನಿಮ್ಮ ಫ್ರೀಡಂಟಿವಿ ವರದಿ ಮಾಡುತ್ತಲೇ ಬಿಡಿಎಯಿಂದ ವಿಜಯಾನಂದ್ ಅವರನ್ನು ಮಾತೃ ಇಲಾಖೆಗೆ ವರ್ಗ ಮಾಡಲಾಗಿದೆ.